ತಿರುವನಂತಪುರ: ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಪ್ಲಾಚಿಮಾಡದಲ್ಲಿ ಮುಚ್ಚಲ್ಪಟ್ಟ ಕೋಕ-ಕೋಲ ಸಂಸ್ಕರಣಾ ಕೇಂದ್ರವನ್ನು ಕೋವಿಡ್ ಕೇರ್ ಘಟಕವಾಗಿ ಮಾರ್ಪಡಿಸಿದ ಕಂಪನಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ. ಕಂಪನಿಯ ಕಾರ್ಯಕ್ಷಮತೆ ಅನುಕರಣೀಯವಾಗಿದೆ ಎಂದು ಸಿಎಂ ಹೇಳಿರುವರು. ಅವರ ಅಭಿನಂದನೆಯನ್ನು ಚಿಕಿತ್ಸಾ ಕೇಂದ್ರದ ಚಿತ್ರಗಳೊಂದಿಗೆ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ.
ಪಾಲಕ್ಕಾಡ್‍ನ ಪೆರುಮಟ್ಟಿಯಲ್ಲಿ 550 ಹಾಸಿಗೆಗಳನ್ನು ಹೊಂದಿರುವ ಎರಡನೇ ಹಂತದ ಕೊರೋನಾ ಚಿಕಿತ್ಸಾ ಕೇಂದ್ರವು ಸರ್ಕಾರದ ಕೊರೋನಾ ತಡೆಗಟ್ಟುವ ಚಟುವಟಿಕೆಗಳಿಗೆ ಉತ್ತಮ ಉತ್ತೇಜನ ನೀಡಿದೆ.
ಕೊರೋನಾ ಚಿಕಿತ್ಸಾ ಕೇಂದ್ರವು ಪ್ಲಾಚಿಮಾಡಾ ಕೋಕಾ-ಕೋಲಾ ಕಂಪನಿಯಲ್ಲಿದೆ. 20 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಸ್ಥಾವರದಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸಿ ಹಿಂದೂಸ್ತಾನ್ ಕೋಕಾ-ಕೋಲಾ ಬಿವರೇಜ್ (ಪಾನೀಯ) ಲಿಮಿಟೆಡ್ ತನ್ನ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಆದರ್ಶಪ್ರಾಯವಾದ ಕೆಲಸಕ್ಕೆ ಮುಂದಾಗಿರುವ ಕಂಪನಿಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
35,000 ಚದರ ಅಡಿ ಕಟ್ಟಡದಲ್ಲಿ 550 ಹಾಸಿಗೆಗಳಿವೆ. ಇದು ಆಮ್ಲಜನಕ ಸೌಲಭ್ಯದೊಂದಿಗೆ 100 ಹಾಸಿಗೆಗಳು, ವೆಂಟಿಲೇಟರ್ ಸೌಲಭ್ಯದೊಂದಿಗೆ 20 ಹಾಸಿಗೆಗಳು ಮತ್ತು 50 ಐಸಿಯು ಹಾಸಿಗೆಗಳನ್ನು ಹೊಂದಿದೆ. ಹವಾನಿಯಂತ್ರಣದೊಂದಿಗೆ ರೆಡಿಮೇಡ್ ಕ್ಯಾಬಿನ್‍ಗಳು, ಎಲ್ಲಾ ಹಾಸಿಗೆಗಳಲ್ಲಿ ಬೇಡಿಕೆಯ ಸಿಲಿಂಡರ್ ಬೆಂಬಲ, ಎರಡು ಕೆಎಲ್ ವರೆಗೆ ಸಾಮಥ್ರ್ಯ ಹೊಂದಿರುವ ಕೆಎಲ್ ಆಕ್ಸಿಜನ್ ಟ್ಯಾಂಕ್, ಪೋರ್ಟಬಲ್ ಎಕ್ಸರೇ ಕನ್ಸೋಲ್, 24 ಗಂಟೆಗಳ ಕೊರೋನಾ, ಒಪಿ ಮತ್ತು ಫಾರ್ಮಸಿ ಎಲ್ಲವೂ ಸಿದ್ಧವಾಗಿದೆ.
ಇದನ್ನು ನಾಲ್ಕು ವಾರಗಳಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸ್ಥಳೀಯಾಡಳಿತಗಳು 80 ಲಕ್ಷ ರೂ. ನೀಡಿದೆ. ಉಳಿದ ಮೊತ್ತವನ್ನು ದೇಣಿಗೆ ಮೂಲಕ ಸಂಗ್ರಹಿಸಲಾಗಿದೆ ಎಂದು ಪಿಣರಾಯಿ ವಿಜಯನ್ ಮಾಹಿತಿ ನೀಡಿರುವರು.
ಈ ಮಧ್ಯೆ ಕಂಪನಿಯನ್ನು ಪುನರಾರಂಭಿಸುವ ಉದ್ದೇಶದಿಂದ ಕೋಕಾ-ಕೋಲಾ ಸ್ಥಾವರವನ್ನು ಕೊರೋನಾ ಚಿಕಿತ್ಸಾ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿ ಪ್ಲಾಚಿಮಾಡಾ ಸ್ಟ್ರೈಕ್ ಕಮಿಟಿ ತೀವ್ರ ಪ್ರತಿಭಟನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಭಿನಂದನೆಗಳು ವ್ಯಕ್ತವಾಗಿರುವುದು ಕುತೂಹಲ ಮೂಡಿಸಿದೆ.
ಪ್ರಬಲ ಪ್ರತಿಭಟನೆಯ ಬಳಿಕ ಪ್ಲ್ಯಾಚಿಮಾಡಾದ ಕೋಕಾ-ಕೋಲಾ ಕಂಪನಿ 2004 ರಲ್ಲಿ ಮುಚ್ಚಲ್ಪಟ್ಟಿತು. 2000 ರಲ್ಲಿ ಘಟಕ ಆರಂಭಗೊಂಡಾಗ ಸಮೀಪದ ಜಲ ಮೂಲಗಳು ಒಣಗಿ ಕಲುಷಿತಗೊಂಡವು. ಇದರ ಬೆನ್ನಲ್ಲೇ ಸ್ಥಳೀಯರು ಸ್ಥಾವರ ಮುಚ್ಚುವಂತೆ ಒತ್ತಾಯಿಸಿ ಮುಷ್ಕರ ಆರಂಭಿಸಿದರು. ಮುಷ್ಕರಕ್ಕೆ ಸ್ಥಳೀಯರಾದ ಮಾಯಿಲಮ್ಮ ನೇತೃತ್ವ ವಹಿಸಿದ್ದರು.