ಕೊಚ್ಚಿ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ವ್ಯಾಪ್ತಿಗೆ ತರಲು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಆರು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಕೇರಳ ಪ್ರದೇಶದ ಗಾಂಧಿ ದರ್ಶನ ಅಧ್ಯಕ್ಷ ಮತ್ತು ಕಾಲಡಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಎಂ.ಸಿ. ದಿಲೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಂ.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದನ್ನು ತಡೆಯಲು ಅರ್ಜಿದಾರರು ತಡೆಯಾಜ್ಞೆ ಕೋರಿದ್ದರು. ಹೈಕೋರ್ಟ್, ಈ ಅರ್ಜಿಯನ್ನು ಪರಿಗಣಿಸಿದೆ. ನಂತರ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ವಿಭಾಗೀಯ ಪೀಠ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.
ಅರ್ಜಿದಾರರು ಹಸ್ತಾಂತರಿಸಿದ ಅರ್ಜಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ನ್ಯಾಯಾಲಯ ಜಿಎಸ್‌ಟಿ ಕೌನ್ಸಿಲ್‌ಗೆ ನಿರ್ದೇಶನ ನೀಡಿದೆ.
''ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದೇಶಾದ್ಯಂತ ಭಾರೀ ಏರಿಕೆಯಾಗುತ್ತಿದೆ. ಇದಕ್ಕೆ ವಿವಿಧ ರಾಜ್ಯಗಳು ವಿಧಿಸುವ ಹೆಚ್ಚುವರಿ ತೆರಿಗೆ ಕಾರಣ,'' ಎಂದು ಅರ್ಜಿದಾರರು ವಾದಿಸಿದ್ದಾರೆ.
''ಬೆಲೆ ಏಕರೂಪವಾಗಿರಬೇಕು. ಆಗಾಗ್ಗೆ ಬೆಲೆ ಏರಿಕೆ ಸಾಮಾನ್ಯ ಜನರ ಜೀವನವನ್ನು ಶೋಚನೀಯವಾಗಿಸುತ್ತಿದೆ. ಚುನಾವಣಾ ಅವಧಿಯಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂಧನ ಬೆಲೆಗಳ ಹೆಚ್ಚಳವು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ,'' ಎಂದು ಕೂಡಾ ಅರ್ಜಿದಾರರು ಹೇಳಿದ್ದಾರೆ.
ಆದರೆ, ''ಇದು ಕೇಂದ್ರ ಸರ್ಕಾರದ ನೀತಿ ಮತ್ತು ನ್ಯಾಯಾಲಯ ಮಧ್ಯಪ್ರವೇಶಿಸಬಾರದು,'' ಎಂದು ಕೇಂದ್ರ ಸರ್ಕಾರದ ವಕೀಲರು ಈ ಸಂದರ್ಭದಲ್ಲಿ ವಾದಿಸಿದರು. ಇದರ ಬೆನ್ನಲ್ಲೇ ನ್ಯಾಯಾಲಯ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.