ನವದೆಹಲಿ: ಕೊರೋನೋತ್ತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನೀರಜ್ ನಿಶ್ಚಲ್ ನೇತೃತ್ವದ ತಂಡ ರಮೇಶ್ ಪೋಖ್ರಿಯಾಲ್ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೋವಿಡ್ ನಂತರ ಎದುರಾದ ಸಮಸ್ಯೆಗಳಿಂದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಏಮ್ಸ್ ಗೆ ದಾಖಲಿಸಲಾಗಿದೆ. ಡಾ.ನೀರಜ್ ನಿಶ್ಚಲ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಏಪ್ರಿಲ್ 21ರಂದು ಪೋಖ್ರಿಯಾಲ್ ಅವರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು. ಟ್ವಿಟ್ಟರ್ ಖಾತೆಯ ಮೂಲಕ ಸಚಿವರು ಈ ವಿಚಾರವನ್ನು ದೃಢಪಡಿಸಿದ್ದರು. ಚಿಕಿತ್ಸೆಯ ಬಳಿಕ ಗುಣಮುಖರಾದ ಅವರು ನಂತರ ತನ್ನ ಕೆಲಸಕ್ಕೆ ಮರಳಿದ್ದರು. ಇದೀಗ ಮತ್ತೆ ಅನಾರೋಗ್ಯ ಕಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.