ನವದೆಹಲಿ: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ ಡೆಲ್ಟಾ ಪ್ಲಸ್ ಕುರಿತು ಮಾತನಾಡಿರುವ ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ. ಪೌಲ್, "ಈ ಹೊಸ ರೂಪಾಂತರದ ಕುರಿತು ಇನ್ನೂ ಸಾಕಷ್ಟು ವೈಜ್ಞಾನಿಕ ಮಾಹಿತಿ ಹಾಗೂ ಇದರ ವಿರುದ್ಧ ಲಸಿಕೆಯ ದಕ್ಷತೆ ಕುರಿತು ಸಾಕ್ಷ್ಯಗಳು ಇನ್ನೂ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
"ಡೆಲ್ಟಾ ರೂಪಾಂತರದಿಂದ ಸೃಷ್ಟಿಯಾಗಿರುವ ಈ ಹೊಸ ರೂಪಾಂತರದ ಕುರಿತು ಅನ್ವೇಷಣೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿವೆ. ಈ ಸೋಂಕು ಎಷ್ಟರ ಮಟ್ಟಿಗಿನ ವೇಗದಲ್ಲಿ ಹರಡಬಹುದು, ಈ ಸೋಂಕಿನ ಗಂಭೀರತೆ ಎಷ್ಟರ ಮಟ್ಟಿಗಿದೆ ಅಥವಾ ಈ ಸೋಂಕಿಗೆ ಈಗ ಲಭ್ಯವಿರುವ ಲಸಿಕೆಗಳು ಪರಿಣಾಮ ಬೀರುವುದೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಸ್ವಲ್ಪ ಸಮಯ ಕಾಯಲೇಬೇಕಿದೆ" ಎಂದು ಹೇಳಿದ್ದಾರೆ.
ಸಂಭಾವ್ಯ ಕೊರೊನಾ ಮೂರನೇ ಅಲೆ ಕುರಿತು ಕೆಲವು ತಜ್ಞರ ಹೇಳಿಕೆಗೆ ಉತ್ತರಿಸಿರುವ ಅವರು, "ವೈರಸ್ ಸ್ವರೂಪವನ್ನು ಯಾರೂ ಊಹಿಸಲು ಸಾಧ್ಯವಾಗದು. ಹೀಗಾಗಿ ಯಾವುದೇ ಕೊರೊನಾ ಅಲೆಗೆ ಇಂಥದ್ದೇ ಸಮಯ ಎಂದು ಕಾಲಮಿತಿ ಇಡಲು ಸಾಧ್ಯವಿಲ್ಲ" ಎಂದಿದ್ದಾರೆ.
"ಈ ಡಿಸೆಂಬರ್ ವೇಳೆಗೆ ದೇಶದಲ್ಲಿ ಮತ್ತೆ ಸೋಂಕಿನ ಪ್ರಕರಣಗಳು ಹೆಚ್ಚಾಗಬಹುದು. ಆದರೆ ಇದು ಕೊರೊನಾ ನಿರ್ಬಂಧಗಳ ಪಾಲನೆ, ಪರೀಕ್ಷೆ, ಲಸಿಕೆ ಪ್ರಮಾಣ ಹಾಗೂ ಸರ್ಕಾರದ ಕಾರ್ಯಸೂಚಿಗಳ ಮೇಲೆ ಅವಲಂಬಿತವಾಗಿದೆ" ಎಂದು ಹೇಳಿದ್ದಾರೆ.
"ಕೊರೊನಾ ಅಲೆ ಸಂಭವಿಸುವುದು, ಸಮಭವಿಸದೇ ಇರುವುದು ಎಲ್ಲವೂ ನಮ್ಮ ಕೈಯಲ್ಲಿದೆ. ಹೀಗಾಗಿ ಯಾವುದೇ ದಿನಾಂಕವನ್ನು ಕೊರೊನಾ ಅಲೆಗೆ ನಿಗದಿಪಡಿಸುವುದು ಸೂಕ್ತವಲ್ಲ. ವೈರಸ್‌ನ ನಡವಳಿಕೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.