ನವದೆಹಲಿ: ಕೋವಿಡ್ -19 ನಿಂದ ಜರ್ಜರಿತಗೊಂಡ ಆರ್ಥಿಕತೆಯ ಪುನಶ್ಚೇತನಕ್ಕಾಗಿ ₹1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ.
ಆರ್ಥಿಕ ಕ್ರಮಗಳನ್ನು ವಿವರಿಸಿರುವ ನಿರ್ಮಲಾ ಸೀತಾರಾಮನ್ ಅವರು, '8 ಆರ್ಥಿಕ ಪರಿಹಾರ ಕ್ರಮಗಳನ್ನು ನಾವು ಪ್ರಕಟಿಸುತ್ತಿದ್ದೇವೆ. ಅವುಗಳಲ್ಲಿ ನಾಲ್ಕು ಸಂಪೂರ್ಣವಾಗಿ ಹೊಸದು. ಮತ್ತು, ಒಂದು ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದ್ದಾಗಿದೆ. ಕೋವಿಡ್ ಪೀಡಿತ ಪ್ರದೇಶಗಳಿಗೆ ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ₹50,000 ಕೋಟಿ ನೀಡಲಾಗುತ್ತಿದೆ,' ಎಂದು ಹೇಳಿದರು.
ಇದರ ಜೊತೆಗೆ, ಇಸಿಎಲ್‌ಜಿಎಸ್ (ತುರ್ತು ಸಾಲ ಖಾತರಿ ಯೋಜನೆ- ಎಮರ್ಜೆನ್ಸಿ ಕ್ರೆಡಿಟ್‌ಲೈನ್ ಗ್ಯಾರಂಟಿ ಸ್ಕೀಮ್)ಗೆ ಹೆಚ್ಚುವರಿಯಾಗಿ ₹1.5 ಲಕ್ಷ ಕೋಟಿಯನ್ನು ನೀಡಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಮೇ 2020 ರಲ್ಲಿ ಘೋಷಿಸಲಾದ ₹20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ್ ಅಭಿಯಾನದಲ್ಲಿ ಇಸಿಎಲ್‌ಜಿಎಸ್‌ಗೆ ₹3 ಲಕ್ಷ ಕೋಟಿ ನಿಗದಿ ಮಾಡಲಾಗಿತ್ತು. ಈಗ ಹೆಚ್ಚುವರಿಯಾಗಿ ₹1.5 ಲಕ್ಷ ಕೋಟಿ ನೀಡಲಾಗುತ್ತಿದೆ. ಇದರ ಒಟ್ಟಾರೆ ಮೊತ್ತ ಈಗ ₹4.5 ಲಕ್ಷ ಕೋಟಿ ಆಗಲಿದೆ.
'ಸಾಲ ಖಾತರಿ ಯೋಜನೆಯು 25 ಲಕ್ಷ ಜನರಿಗೆ ಅನುಕೂಲ ಕಲ್ಪಿಸಲಿದೆ. ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು. ಗರಿಷ್ಠ ₹1.25 ಲಕ್ಷಗಳನ್ನು ಸಾಲದ ರೂಪದಲ್ಲಿ ವಿತರಿಸಲಾಗುತ್ತದೆ. ಹೊಸ ಸಾಲ ನೀಡುವುದರತ್ತ ಸದ್ಯ ಗಮನ ಹರಿಸಲಾಗಿದೆ,' ಎಂದು ಅವರು ಹೇಳಿದ್ದಾರೆ.
'ಯೋಜನೆಯಡಿ ಬಡ್ಡಿದರವು ಆರ್‌ಬಿಐ ನಿಗದಿಪಡಿಸಿರುವ ದರಕ್ಕಿಂತ ಶೇ 2ರಷ್ಟು ಕಡಿಮೆ ಇರಲಿದೆ. ಸಾಲದ ಅವಧಿ 3 ವರ್ಷಗಳಾಗಿರುತ್ತವೆ. ಎನ್‌ಪಿಎಗಳನ್ನು ಹೊರತುಪಡಿಸಿ, ಹೊಸಬರಿಗೆ ಸಾಲ ನೀಡಲಾಗುತ್ತದೆ,' ಎಂದು ನಿರ್ಮಲಾ ಹೇಳಿದ್ದಾರೆ.
'ಮಾನ್ಯತೆ ಪಡೆದ 10,700 ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಪ್ರವಾಸೋದ್ಯಮ ಮಧ್ಯಸ್ಥಗಾರರು (ಟಿಟಿಎಸ್) ಹೊಸ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗಲಿದ್ದಾರೆ,' ಎಂದೂ ನಿರ್ಮಲಾ ಅವರು ತಿಳಿಸಿದರು.
'ಅಂತರರಾಷ್ಟ್ರೀಯ ಪ್ರಯಾಣ ಪುನರಾರಂಭವಾದ ನಂತರ, ಭಾರತಕ್ಕೆ ಬರುವ ಮೊದಲ 5 ಲಕ್ಷ ಪ್ರವಾಸಿಗರು ವೀಸಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮಾರ್ಚ್ 31, 2022 ರವರೆಗೆ ಇದು ಅನ್ವಯವಾಗಲಿದೆ. ಅಥವಾ, 5 ಲಕ್ಷ ವೀಸಾ ವಿತರಣೆ ನಂತರ ಈ ಯೋಜನೆ ಅಂತ್ಯವಾಗಲಿದೆ. ಒಬ್ಬ ಪ್ರವಾಸಿ ಒಮ್ಮೆ ಮಾತ್ರ ಇದರ ಲಾಭ ಪಡೆಯಬಹುದು,' ಎಂದು ನಿರ್ಮಲಾ ಹೇಳಿದರು.
'ಆತ್ಮನಿರ್ಭಾರ ಭಾರತ್ ರೋಜ್‌ಗಾರ್ ಯೋಜನೆಯನ್ನು ಈಗ 2021 ರ ಜೂನ್ 30 ರಿಂದ 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಸುಮಾರು 80,000 ಸಂಸ್ಥೆಗಳ 21.4 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಈ ಯೋಜನೆಯ ಲಾಭ ಪಡೆದಿದ್ದಾರೆ,' ಎಂದು ಹಣಕಾಸು ಸಚಿವೆ ತಿಳಿಸಿದರು.
'ಸಾರ್ವಜನಿಕ ಆರೋಗ್ಯಕ್ಕಾಗಿ ₹23,220 ಕೋಟಿ ನೀಡಲಾಗುತ್ತಿದೆ. ಮಕ್ಕಳ ಆರೈಕೆಯ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಇದೇ ಹಣದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತದೆ. ಈ ಹಣಕಾಸು ವರ್ಷದಲ್ಲಿಯೇ ನಿಗದಿತ ಹಣವನ್ನು ಬಿಡುಗಡೆ ಮಾಡಲಾಗುತ್ತದೆ,' ಎಂದು ಹಣಕಾಸು ಇಲಾಖೆ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
'ಬಡವರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲು ಈ ಹಣಕಾಸು ವರ್ಷದಲ್ಲಿ ₹93,869 ಕೋಟಿ ನೀಡಲಾಗುತ್ತದೆ. 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಗಾಗಿ ಒಟ್ಟು ₹2,27,841 ಕೋಟಿ ನೀಡಲಾಗುತ್ತಿದೆ,' ಎಂದು ಅನುರಾಗ್ ಠಾಕೂರ್ ತಿಳಿಸಿದರು.
ಪ್ರೋಟೀನ್ ಆಧಾರಿತ ರಸಗೊಬ್ಬರದ ಹೆಚ್ಚುವರಿ 15 ಸಾವಿರ ಕೋಟಿ ಸಬ್ಸಿಡಿಯನ್ನು ರೈತರು ಪಡೆಯಲಿದ್ದಾರೆ ಎಂದೂ ಸಚಿವರು ತಿಳಿಸಿದರು.