ನವದೆಹಲಿ: ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಪಡೆದ ಹನ್ನೊಂದು ಜನರು ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಗೆ ತುತ್ತಾಗಿರುವುದು ಭಾರತ ಮತ್ತು ಇಂಗ್ಲೆಂಡ್‌ನ ವೈದ್ಯರು ನಡೆಸಿರುವ ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಕೇರಳದ ವೈದ್ಯಕೀಯ ಕೇಂದ್ರದಿಂದ ಏಳು ಪ್ರಕರಣಗಳು ವರದಿಯಾಗಿದ್ದು, ಇಲ್ಲಿ ಅಸ್ಟ್ರಾಜೆನೆಕಾ ಉತ್ಪಾದಿಸಿರುವ ಕೋವಿಶೀಲ್ಡ್ ಕೋವಿಡ್ -19 ಲಸಿಕೆಯನ್ನು 12 ಲಕ್ಷ ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ನಾಲ್ಕು ಪ್ರಕರಣಗಳು ಬ್ರಿಟನ್ನಿನ ನಾಟಿಂಗ್ ಹ್ಯಾಮ್‌ನಿಂದ ವರದಿಯಾಗಿವೆ. ಅಲ್ಲಿ 7 ಲಕ್ಷ ಜನರು ಲಸಿಕೆ ಸ್ವೀಕರಿಸಿದ್ದರು.
ಗುಯಿಲಿನ್-ಬಾರ್ ಸಿಂಡ್ರೋಮ್ (ಜಿಬಿಎಸ್) ಸಮಸ್ಯೆಯಿಂದಾಗಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅದರ ಬಾಹ್ಯ ನರಮಂಡಲದ ಭಾಗವನ್ನು ತಪ್ಪಾಗಿ ಆಕ್ರಮಿಸುತ್ತದೆ.
ಜೂನ್ 10 ರಂದು ಅನ್ನಲ್ಸ್ ಆಫ್ ನ್ಯೂರಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಎರಡು ಅಧ್ಯಯನಗಳು, ಜಿಬಿಎಸ್ ಬಗ್ಗೆ ವಿವರಿಸಿವೆ.
ಪ್ರಕರಣಗಳು ವರದಿಯಾದ ಪ್ರದೇಶಗಳಿಂದ ಜಿಬಿಎಸ್ ಆವರ್ತನವು ನಿರೀಕ್ಷೆಗಿಂತ 10 ಪಟ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಎರಡು ಅಧ್ಯಯನಗಳ ಅಧ್ಯಯನಕಾರರು ಹೇಳಿದ್ದಾರೆ.
ಏಪ್ರಿಲ್ 22, 2021ರ ಹೊತ್ತಿಗೆ, ಕೇರಳದ ಮೂರು ಜಿಲ್ಲೆಗಳಲ್ಲಿ ಸುಮಾರು 15 ಲಕ್ಷ ಜನರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲಾಗಿದ್ದು, ಇದರಲ್ಲಿ ಶೇ. 80 ಕ್ಕೂ ಹೆಚ್ಚು ವ್ಯಕ್ತಿಗಳು (12 ಲಕ್ಷ ಜನರು) ಅಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದರು.