ಕಾಸರಗೋಡು: ಕಾಞಂಗಾಡು ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಕಟ್ಟುನಿಟ್ಟು ಜಾರಿಗೊಳಿಸಲಾಗಿದೆ.
ಕೋವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಮತ್ತು ಬಿ ಕ್ಯಾಟಗರಿಯಲ್ಲಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ನಡೆಸುವ ನಿಟ್ಟಿನಲ್ಲಿ ನಗರಸಭೆ ಕೋರ್ ಸಮಿತಿ ಸಭೆ ಈ ತೀರ್ಮಾನ ಕೈಗೊಂಡಿದೆ.
ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ವಿವಾಹ, ಹುಟ್ಟುಹಬ್ಬ, ಮರಣೋತ್ತರ ಸಮಾರಂಭ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವ ವೇಳೆ ನಗರಸಭೆಯ ಮತ್ತು ಪೆÇಲೀಸರ ಮುಂಗಡ ಅನುಮತಿಪತ್ರ ಕಡ್ಡಾಯವಾಗಿದೆ. ವ್ಯಾಪಾರ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು ಸರಕಾರ ತಿಳಿಸಿರುವ ಕೋವಿಡ್ ಕಟ್ಟುನಿಟ್ಟುಗಳನ್ನು ಅನುಸರಿಸಿ ವಾಕ್ಸಿನ್ ಪಡೆಯಬೇಕು. ಸದ್ರಿ ಕೋವಿಡ್ ರೋಗ ಲಕ್ಷಣ ಹೊಂದಿರುವವರು, ರೋಗಿಗಳ ಪ್ರಾಥಮಿಕ ಸಂಪರ್ಕ ಹೊಂದಿರುವವರು ಕೋವಿಡ್ ಟೆಸ್ಟ್ ಗೆ ಒಳಗಾಗಬೇಕು. ಇತರ ದೇಶಗಳಿಂದ, ರಾಜ್ಯಗಳಿಂದ ಊರಿಗೆ ಮರಳಿದ ಮಂದಿ ಕಡ್ಡಾಯ 14 ದಿನಗಳ ಕ್ವಾರೆಂಟೈನ್ ಪಾಲಿಸಿ ನಂತರ ಕೋವಿಡ್ ಟೆಸ್ಟ್ ನಡೆಸಿ ಕೋವಿಡ್ ಪಾಸಿಟಿವ್ ಆಗಿಲ್ಲ ಎಂದು ಖಚಿತಪಡಿಸಬೇಕು ಎಂದು ಸಭೆ ತಿಳಿಸಿದೆ.
60 ವರ್ಷಕ್ಕಿಂತ ಅಧಿಕ ವಯೋಮಾನದವರು, ಪುಟ್ಟ ಮಕ್ಕಳು ನೆರೆಮನೆಗಳ ಸಮಾರಂಭಗಳಿಂದ ದೂರವಿರಬೇಕು. ಅಂಗಡಿಗಳಲ್ಲಿ, ಆರಾಧನಾಲಯಗಳಲ್ಲಿ, ಮನೆಗಳಲ್ಲಿ ಎ.ಸಿ. ಬಳಸಕೂಡದು. ಶಾಪಿಂಗ್ ಸಂಕೀರ್ಣಗಳು, ಆರಾಧನಾಲಯಗಳು, ಹೋಟೆಲ್ ಗಳು, ಮೈದಾನಗಳು, ಮಾರುಕಟ್ಟೆ, ಸಮುದ್ರ ಕಿನಾರೆಗಳು, ಬಸ್ ತಂಗುದಾಣಗಳು ಇತ್ಯಾದಿಗಳಲ್ಲಿ ಜನದಟ್ಟಣೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಭಾಂಗಣ ಇತ್ಯಾದಿಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿಯಷ್ಟೇ ಭಾಗವಹಿಸಬಹುದು.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ, ಪೆÇಲೀಸ್ ಇಲಾಖೆಗಳು ಜಂಟಿಯಾಗಿ ಪ್ರತಿರೋಧ ಚಟುವಟಿಕೆಗಳನ್ನು ನಡೆಸುವರು. ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳು ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಚಟುವಟಿಕೆ ನಡೆಸಲು ಅನುಮತಿ ನೀಡಲಾಗುವುದು. ಇಲ್ಲಿನ ಮೀನು, ಮಾಂಸ ವ್ಯಾಪಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಇರುವುದು. ತಳ್ಳುಗಾಡಿಗಳ ವ್ಯಾಪಾರ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ಅಕ್ರಮವಾಗಿ ಹಾದಿಬದಿ ವ್ಯಾಪಾರ ಪೂರ್ಣ ನಿಷೇಧಿಸಲು ಮತ್ತು ಸೆಕ್ಟರಲ್ ಮೆಜಿಸ್ಟ್ರೇಟ್ ರ ನಿಗಾ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲ, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಹೊಸದುರ್ಗ ಪೆÇಲೀಸ್ ಠಾಣೆಯ ಹೌಸ್ ಆಫೀಸರ್, ಜಿಲ್ಲಾ ಆಸ್ಪತ್ರೆ ಸಹಾಯಕ ವರಿಷ್ಠಾಧಿಕಾರಿ ಚಂದ್ರ ಮೋಹನ್, ಶಾಸಕರ ಪ್ರತಿನಿಧಿ ಸಿ.ಕೆ.ಬಾಬುರಾಜ್, ಮಾಜಿ ಅಧ್ಯಕ್ಷ ವಿ.ವಿ.ರಮೇಶನ್, ಸೆಕ್ಟರಲ್ ಮೆಜಿಸ್ಟೇಟ್ ಗಳು, ಹೊಸದುರ್ಗ, ಕಾಞಂಗಾಡು ಗ್ರಾಮಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.