ನವದೆಹಲಿ: ಕೊರೋನಾ ಎರಡನೇ ಅಲೆ ಉತ್ತರ ಪ್ರದೇಶ ರಾಜ್ಯವನ್ನು ಬಹುವಾಗಿ ಕಾಡಿದೆ. ಜನಸಾಮಾನ್ಯರಿಗೆ ಸರ್ಕಾರದ ಕಾರ್ಯವೈಖರಿ ಮೇಲೆ ಕೂಡ ಅಸಮಾಧಾನ ಉಂಟಾಗಿದೆ.
ಈ ಸಂದರ್ಭದಲ್ಲಿ ಆಗಿರುವ ಹಾನಿಯನ್ನು ತಪ್ಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರೆ, ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆಯ ಮಾತುಗಳು ಕೇಳಿಬರುತ್ತಿರುವುದರ ಮಧ್ಯೆ ಇಂದಿನ ಯೋಗಿ ಆದಿತ್ಯನಾಥ್-ಪ್ರಧಾನಿ ಮೋದಿಯವರ ಭೇಟಿ ಮಹತ್ವ ಪಡೆದಿದೆ.
ಲಕ್ನೊದಲ್ಲಿ ಎರಡು ದಿನಗಳ ಕಾಲ ಬೀಡುಬಿಟ್ಟಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹಲವು ವಿಷಯಗಳನ್ನು ಮೋದಿಯವರಿಗೆ ಈಗಾಗಲೇ ವಿವರಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುತ್ತಿದೆ, ಈ ಸಮಯದಲ್ಲಿ ಬಿಜೆಪಿ ಯಾವ ರೀತಿ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಮೋದಿಯವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ಮತ್ತು ನಡ್ಡಾ ಮಧ್ಯೆ ಹಾಗೂ ಆರ್ ಎಸ್ ಎಸ್ ನ ಇತರ ಕಾರ್ಯಕರ್ತರ ನಡುವೆ ಮಾಹಿತಿ ವಿನಿಮಯ ನಡೆಯುತ್ತಿರುತ್ತದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಪುನರ್ರಚನೆ ವಿಷಯ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಇತ್ತೀಚೆಗೆ ಹೇಳಿದ್ದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುನ್ನ ಉನ್ನತ ನಾಯಕರು ರಾಜ್ಯದಲ್ಲಿ ಕೆಲವು ಬದಲಾವಣೆಗಳನ್ನು ಬಯಸುತ್ತಿದ್ದಾರೆ ಎಂಬ ಮಾತುಗಳಿವೆ. ಪ್ರಧಾನಿ ಕಚೇರಿಯ ಮಾಜಿ ಅಧಿಕಾರಿ ಮತ್ತು ವಿಧಾನ ಪರಿಷತ್ ಸದಸ್ಯ ಎ ಕೆ ಶರ್ಮ ಅವರು ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಹುದ್ದೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಶರ್ಮ ಅವರಿಗೆ ಸಂಪುಟದಲ್ಲಿ ಪ್ರಮುಖ ಹುದ್ದೆ ಸಿಗಲಿದೆ ಎಂದು ಮೂಲಗಳಿಂದ ಪತ್ರಿಕೆಗೆ ಮಾಹಿತಿ ಸಿಕ್ಕಿದೆ. ನಿನ್ನೆ ಆದಿತ್ಯನಾಥ್ ಮತ್ತು ಅಮತ್ ಶಾ ಭೇಟಿ ಸಂದರ್ಭದಲ್ಲಿ ಶರ್ಮ ರಾಷ್ಟ್ರ ರಾಜಧಾನಿಯಲ್ಲಿದ್ದರು.