ತೂತುಕುಡಿ: ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಉಪ್ಪಿನಲ್ಲಿ ಸೂಕ್ಷ್ಮಪ್ಲಾಸ್ಟಿಕ್ ಕಣಗಳು ಕಲಬೆರಕೆಯಾಗಿರುವುದನ್ನು ಹೊಸ ಸಂಶೋಧನಾ ಅಧ್ಯಯನವೊಂದು ಬಹಿರಂಗಪಡಿಸಿದೆ.
ಮೈಕ್ರೋಪ್ಲಾಸ್ಟಿಕ್ ಕಲಬೆರಕೆ ಅಂಶವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಹಾರ ಸುರಕ್ಷಾ ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಿಯತವಾಗಿ ಮಾದರಿಗಳ ಪರೀಕ್ಷೆ ನಡೆಸಿದಾಗ ಉಪ್ಪಿನಲ್ಲಿ ಹೊರಗಿನ ವಸ್ತುಗಳು ಸೇರಿರುವುದು ಬಹಿರಂಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗುಜರಾತ್ ಹೊರತುಪಡಿಸಿದರೆ ದೇಶದಲ್ಲೇ ಉಪ್ಪು ಉತ್ಪಾದನೆಯಲ್ಲಿ ತೂತುಕುಡಿ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸುಮಾರು 25 ಲಕ್ಷ ಟನ್ ಉಪ್ಪು ಇಲ್ಲಿ ಉತ್ಪಾದನೆಯಾಗುತ್ತಿದೆ. ಕರಾವಳಿಯ ಸುಮಾರು 25 ಸಾವಿರ ಎಕರೆ ಪ್ರದೇಶವನ್ನು ಉಪ್ಪಿನ ಗದ್ದೆಗಳಾಗಿ ಪರಿವರ್ತಿಸಲಾಗಿದ್ದು, ಬಹುತೇಕ ಮಹಿಳೆಯರು ಸೇರಿದಂತೆ ಕನಿಷ್ಠ 30 ಸಾವಿರ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಾರೆ.
ತೂತುಕುಡಿಯ ಉಪ್ಪು ಉತ್ಪಾದನಾ ಪ್ರಕ್ರಿಯೆಯಲ್ಲಿ ಲವಣಯುಕ್ತ ನೀರನ್ನು ಅಂತರ್ಜಲದಿಂದ ಆವಿ ಫಲಕಗಳಿಗೆ ಪಂಪ್ ಮಾಡುವುದನ್ನು ಒಳಗೊಂಡಿದ್ದು, ನೇರ ಸೂರ್ಯಕಿರಣಗಳಿಂದ ಇದು ಹರಳುಗಟ್ಟುತ್ತದೆ. ಇಡೀ ಪ್ರಕ್ರಿಯೆಯ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಉತ್ತಮ ಗುಣಮಟ್ಟದ ಸೋಡಿಯಂ ಕ್ಲೋರೈಡ್ ಉತ್ಪಾದನೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ. ಫಲಕಗಳಿಂದ ಸಂಗ್ರಹಿಸಿದ ಉಪ್ಪನ್ನು ಸಂಸ್ಕರಿಸಿ ಅಯೋಡಿನ್ ಸೇರಿಸಲಾಗುತ್ತದೆ ಹಾಗೂ ಪ್ಯಾಕ್ ಮಾಡುವ ಮುನ್ನ ಶುದ್ಧೀಕರಿಸಲಾಗುತ್ತದೆ.
ತೂತುಕುಡಿಯಲ್ಲಿ ಉತ್ಪಾದನೆಯಾಗುವ ಉಪ್ಪಿನ ಬಗ್ಗೆ ಆರು ಮಂದಿ ಭೂಗೋಳ ತಜ್ಞರು ಸಂಶೋಧನೆ ಕೈಗೊಂಡಿದ್ದು, ದಕ್ಷಿಣ ಕೊರಿಯಾದ ಸಾಂಗ್ ಯಾಂಗ್ ಚಾಂಗ್ ಅವರೂ ತಂಡದಲ್ಲಿದ್ದರು.ಎಲ್ಸೆವೀರ್‌ನ ಮೆರೈನ್ ಪೊಲ್ಯೂಶನ್ ಬುಲೆಟಿನ್‌ನಲ್ಲಿ ಕಲಬೆರಕೆ ಬಗೆಗಿನ ಪ್ರಬಂಧ ಪ್ರಕಟಿಸಲಾಗಿದೆ. ವೆಂಬೂರ್ ಮತ್ತು ತಿರುಚೆಂಡೂರುನಲ್ಲಿ ಉಪ್ಪಿನ ಫಲಕಗಳಿಂದ ಸುಮಾರು 25 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಪ್ರಬಂಧದಲ್ಲಿ ವಿವರಿಸಲಾಗಿದೆ.