ತಿರುವನಂತಪುರ: ಕೇರಳದಲ್ಲಿ ಮೊದಲ ಎಲ್‍ಎನ್‍ಜಿ ಬಸ್ ಸೇವೆ ನಾಳೆಯಿಂದ(ಸೋಮವಾರ) ಆರಂಭವಾಗಲಿದೆ. ಹಸಿರು ಎಲ್‍ಎನ್‍ಜಿ ಸೇವೆಗಳು ಸಾರ್ವಜನಿಕ ಸಾರಿಗೆಯಲ್ಲಿ ಇಂಧನ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ತಿರುವನಂತಪುರಂ-ಎರ್ನಾಕುಳಂ ಮತ್ತು ಎರ್ನಾಕುಳಂ-ಕೋಝಿಕೋಡ್ ಮಾರ್ಗಗಳಲ್ಲಿ ಬಸ್ಸುಗಳು ಮೊದಲ ಹಂತದಲ್ಲಿ ಸಂಚಾರಾರಂಭ ನಡೆಸಲಿವೆ.
ತಿರುವನಂತಪುರಂ ಕೇಂದ್ರ ಬಸ್ ನಿಲ್ದಾಣದಿಂದ ಮೊದಲ ಸೇವೆಯನ್ನು ಸಾರಿಗೆ ಸಚಿವ ಆಂಥೋನಿ ರಾಜು ಅವರು ಸೋಮವಾರ ಮಧ್ಯಾಹ್ನ 12 ಗಂಟೆಗೆ ನಿಶಾನೆ ಬೀಸಿ ಉದ್ಘಾಟಿಸುವರು. ಹಸಿರು ಇಂಧನಕ್ಕೆ ಸ್ಥಳಾಂತರವು ಕೆಎಸ್‍ಆರ್‍ಟಿಸಿಯ ಪುನರ್ರಚನೆಯ ಚಾಲನೆಯ ಒಂದು ಭಾಗವಾಗಿದ್ದು, ಹಸಿರು ಇಂಧನಗಳ ಬದಲಾವಣೆಯು ಪ್ರಪಂಚದಾದ್ಯಂತ ಹೆಚ್ಚು ವ್ಯಾಪಕವಾಗಿ ಹರಡುತ್ತಿದೆ.
ಕೆಎಸ್‍ಆರ್‍ಟಿಸಿ ಡೀಸೆಲ್ ಬಸ್‍ಗಳನ್ನು ಹಸಿರು ಇಂಧನಗಳಾದ ಎಲ್‍ಎನ್‍ಜಿ ಮತ್ತು ಸಿಎನ್‍ಜಿಯಾಗಿ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಾರಿಗೆ ಸಚಿವರು ಹೇಳಿರುವರು. ಈಗಿರುವ 400 ಹಳೆಯ ಡೀಸೆಲ್ ಬಸ್‍ಗಳನ್ನು ಎಲ್‍ಎನ್‍ಜಿಗೆ ಪರಿವರ್ತಿಸಲು ಆದೇಶಿಸಲಾಗಿದೆ.
ಪ್ರಮುಖ ಸರ್ಕಾರಿ ಸ್ವಾಮ್ಯದ ಕಂಪನಿಯಾದ ಪೆಟ್ರೋನೆಟ್ ಎಲ್‍ಎನ್‍ಜಿ ಲಿಮಿಟೆಡ್ ತನ್ನ ಅಸ್ತಿತ್ವದಲ್ಲಿರುವ ಎರಡು ಎಲ್‍ಎನ್‍ಜಿ ಬಸ್‍ಗಳನ್ನು ಮೂರು ತಿಂಗಳ ಕಾಲ ಕೆಎಸ್‍ಆರ್‍ಟಿಸಿಗೆ ಹಸ್ತಾಂತರಿಸಿದೆ. ಈ ಮೂರು ತಿಂಗಳಲ್ಲಿ ಈ ಬಸ್‍ಗಳ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳುವುದು. ಚಾಲಕ ಮತ್ತು ನಿರ್ವಹಣಾ ವಿಭಾಗದ ಅಭಿಪ್ರಾಯಗಳನ್ನು ಕೋರಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ.