ನವದೆಹಲಿ: ಕೋವಿಡ್ ಲಸಿಕೆ ಹಾಕಿಸಿಕೊಂಡ ನಂತರ ನೀಡಲಾಗಿರುವ ಪ್ರಮಾಣಪತ್ರದಲ್ಲಿ ನಮೂದಾಗಿರುವ ವೈಯಕ್ತಿಕ ವಿವರಗಳಲ್ಲಿ ತಿದ್ದುಪಡಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಫಲಾನುಭವಿಗಳು 'ಕೋವಿನ್' ವೆಬ್‌ಸೈಟ್‌ಗೆ ಭೇಟಿ ನೀಡಿ ತಿದ್ದುಪಡಿಗಳನ್ನು ಮಾಡಬಹುದು. ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮದಿನಾಂಕ, ಲಿಂಗ ಸೇರಿದಂತೆ ಇತರ ವಿವರಗಳು ತಪ್ಪಾಗಿ ನಮೂದಾಗಿದ್ದರೆ ಅವುಗಳನ್ನು ಸರಿಪಡಿಸಬಹುದು ಎಂದು ಆರೋಗ್ಯ ಸೇತು ಆಯಪ್‌ನ ಟ್ವಿಟರ್ ಖಾತೆಯಲ್ಲಿ ಬುಧವಾರ ತಿಳಿಸಲಾಗಿದೆ.
'ಕೋವಿನ್ ಲಸಿಕೆ ಪ್ರಮಾಣಪತ್ರ'ವನ್ನು ಪ್ರಯಾಣದ ಸಂದರ್ಭದಲ್ಲಿ ಹಾಗೂ ಇತರ ಕೆಲವು ನಿರ್ದಿಷ್ಟ ಸೇವೆಗಳನ್ನು ಪಡೆಯುವಾಗ ಹಾಜರುಪಡಿಸಬೇಕಾಗುತ್ತದೆ.
'ಕೋವಿನ್' ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್ ಸಂಖ್ಯೆಯನ್ನು ಬಳಸಿ ಲಸಿಕೆಯ ಎಷ್ಟನೇ ಡೋಸ್ ಪಡೆಯಲಾಗಿದೆ ಎಂಬ ವಿವರವನ್ನು ಸಹ ಅಪ್‌ಡೇಟ್ ಮಾಡಬಹುದು ಎಂದೂ ತಿಳಿಸಲಾಗಿದೆ.