ನವದೆಹಲಿ:ಸಮಾಜದಲ್ಲಿಯ ಅತ್ಯಂತ ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರನ್ನು ಗುರುತಿಸಿ,ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್‌ಎ)ಯ ವ್ಯಾಪ್ತಿಗೊಳಪಡಿಸುವಂತೆ ಕೇಂದ್ರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕಡುಬಡವರಿಗೆ ಆಹಾರ ಧಾನ್ಯಗಳ ತೀವ್ರ ಅಗತ್ಯವಿದೆ,ಆದರೆ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬ ವಿವಿಧ ವರದಿಗಳ ನಡುವೆಯೇ ಸರಕಾರದ ಈ ಸೂಚನೆ ಹೊರಬಿದ್ದಿದೆ.
ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 1.97 ಕೋ.ಜನರನ್ನು ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಸೇರಿಸಲು ಅವಕಾಶವಿದೆ. 14 ರಾಜ್ಯಗಳು ತಮ್ಮ ಶೇ.100ರಷ್ಟು ಸೇರ್ಪಡೆ ಕೋಟಾವನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾಜದಲ್ಲಿಯ ಅತ್ಯಂತ ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿಯ ಎಲ್ಲ ಅರ್ಹ ವ್ಯಕ್ತಿಗಳನ್ನು ಎನ್‌ಎಫ್‌ಎಸ್‌ಎ ವ್ಯಾಪ್ತಿಗೊಳಪಡಿಸುವುದು ಮುಖ್ಯವಾಗಿದೆ ಎಂದು ಆಹಾರ ಸಚಿವಾಲಯವು ಹೇಳಿದೆ.
ಬೀದಿಬದಿಯ ನಿವಾಸಿಗಳು,ಚಿಂದಿ ಆಯುವವರು,ಬೀದಿಬದಿ ವ್ಯಾಪಾರಿಗಳು ಮತ್ತು ರಿಕ್ಷಾ ಎಳೆಯುವವರಂತಹ ದುರ್ಬಲ ಮತ್ತು ಕಡುಬಡ ವ್ಯಕ್ತಿಗಳಿಗೆ ನೆರವಾಗುವಂತೆ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಎನ್‌ಎಫ್‌ಎಸ್‌ಎ ಅಡಿ ಸರಕಾರವು ಪ್ರತಿ ವ್ಯಕ್ತಿಗೆ ಮಾಸಿಕ ಐದು ಕೆ.ಜಿ.ಗೋದಿ ಮತ್ತು ಅಕ್ಕಿಯನ್ನು ಪ್ರತಿ ಕೆ.ಜಿಗೆ 2-3 ರೂ.ದರದಲ್ಲಿ ವಿತರಿಸುತ್ತಿದೆ. ಸುಮಾರು 80 ಕೋ.ಜನರು ಈ ಕಾಯ್ದೆಯ ವ್ಯಾಪ್ತಿಗೊಳಪಟ್ಟಿದ್ದಾರೆ.