ನವದೆಹಲಿ: ಕೊರೋನವೈರಸ್ ಸಂಬಂಧಿತ ಸಾವುಗಳು ಎಲ್ಲೇ ನಡೆದರೂ ಅದನ್ನು ಕೋವಿಡ್ ಸಾವುಗಳು ಎಂದು ಪ್ರಮಾಣೀಕರಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರಕಾರ ತಿಳಿಸಿದೆ.
ಕನಿಷ್ಠ ಆರು ರಾಜ್ಯಗಳಲ್ಲಿನ ಸಾವಿನ ಅಂಕಿ ಅಂಶಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಮಾಧ್ಯಮಗಳು ಬೆಟ್ಟು ಮಾಡಿದ ಬಳಿಕ ಸುಪ್ರೀಂಕೋರ್ಟ್ ಗೆ ಕೇಂದ್ರ ಸರಕಾರ ಈ ಭರವಸೆ ನೀಡಿದೆ.
ಈ ನಿಯಮವನ್ನು ಪಾಲಿಸಲು ವಿಫಲರಾಗುವ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ನಿನ್ನೆ ತಡರಾತ್ರಿ ಸಲ್ಲಿಸಿದ 183 ಪುಟಗಳ ಅಫಿಡವಿಟ್‌ನಲ್ಲಿ ಕೇಂದ್ರ ಭರವಸೆ ನೀಡಿದೆ.
ಇಲ್ಲಿಯವರೆಗೆ ಆಸ್ಪತ್ರೆಗಳಲ್ಲಿ ನಡೆದ ಕೊರೋನವೈರಸ್ ರೋಗಿಗಳ ಸಾವುಗಳು ಮಾತ್ರ ಕೋವಿಡ್ ಎಂದು ಪ್ರಮಾಣೀಕರಿಸಲ್ಪಟ್ಟಿದ್ದವು. ಮನೆಯಲ್ಲಿ ಅಥವಾ ಆಸ್ಪತ್ರೆಯ ವಾಹನ ನಿಲುಗಡೆ ಸ್ಥಳಗಳಲ್ಲಿ ಸಂಭವಿಸಿದ ಸಾವುಗಳನ್ನು ಪ್ರಮಾಣೀಕರಿಸಲಾಗಿಲ್ಲ. ಇದು ಲಕ್ಷಾಂತರ ಸಂಖ್ಯೆಯಲ್ಲಿರುವ ಸಾವಿನ ಅಂಕಿ ಅಂಶಗಳಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ.
ಈ ವರ್ಷ ಹಾಗೂ ಹಿಂದಿನ ವರ್ಷದ ಸಾವಿನ ಅಂಕಿ-ಅಂಶಗಳಲ್ಲಿ ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ದಿಲ್ಲಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಐದು ರಾಜ್ಯಗಳಲ್ಲಿ ಮಾತ್ರ 4.8 ಲಕ್ಷ ವಿವರಿಸಲಾಗದ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು NDTV ಈ ಹಿಂದೆ ವಿಶ್ಲೇಷಿಸಿದೆ.
ಈ ವರ್ಷದ ಮೊದಲ ಐದು ತಿಂಗಳಲ್ಲಿ ವಿವರಿಸಲಾಗದ ಕಾರಣಗಳಿಂದ 75,000 ಜನರು ಸಾವನ್ನಪ್ಪಿದ್ದಾರೆ ಎಂದು ನಿನ್ನೆ, ಬಿಹಾರ ರಾಜ್ಯಕ್ಕೆ ಸಂಬಂಧಿಸಿದ ಅಂಕಿ-ಅಂಶದಿಂದ ಬಹಿರಂಗವಾಗಿದೆ. ಇದು ರಾಜ್ಯದ ಅಧಿಕೃತ ಸಾಂಕ್ರಾಮಿಕ ಸಾವಿನ ಅಂಕಿ ಅಂಶಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ.