ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೂನ್ 21ರಂದು (ಸೋಮವಾರ) ಮುಂಜಾನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
'ಇಂದು ಜೂನ್ 21, ಏಳನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಿದ್ದೇವೆ. 'ಆರೋಗ್ಯಕ್ಕಾಗಿ ಯೋಗ' ಎನ್ನುವುದು ಈ ಬಾರಿಯ ಸಂದೇಶವಾಗಿದ್ದು, ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕೇಂದ್ರೀಕರಿಸುತ್ತದೆ' ಎಂದು ಮೋದಿ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
'ಅಂದು ಮುಂಜಾನೆ 6.30ಕ್ಕೆ ನಾನು ಯೋಗ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವೆ' ಎಂದೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಸಭೆ ಸೇರುವುದರ ಮೇಲಿನ ನಿರ್ಬಂಧಗಳ ಕಾರಣ, ಯೋಗ ದಿನ ಪ್ರಮುಖ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುವುದು. ಇದರಲ್ಲಿ ಪ್ರಧಾನಿ ಅವರ ಭಾಷಣವು ಪ್ರಮುಖವಾಗಿದೆ ಎಂದು ಆಯುಷ್ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.