ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿನ 14ನೇ ವಾರ್ಡಿನಲ್ಲಿರುವ ಪೆರಡಾಲ ಕೊರಗ ಕಾಲನಿ ಕೋವಿಡ್ ನಿಂದಾಗಿ ಸಂಪೂರ್ಣ ಶೀಲ್ಡೌನ್ ಆಗಿದೆ. ಕಾಲನಿ ನಿವಾಸಿಗಳಿಗೆ ಮನೆಬಿಟ್ಟು ಹೊರಗಡೆ ತೆರಳದಂತೆ ಆರೋಗ್ಯ ಇಲಾಖೆಯಿಂದ ನಿರ್ಬಂಧ ಹೇರಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಬದಿಯಡ್ಕ ಸೇವಾ ಭಾರತಿ ಸ್ವಯಂಸೇವಕರು ಎಲ್ಲಾ ಮನೆಗಳಿಗೆ ಆಹಾರ ವಸ್ತು, ಔಷಧಿ ಹಾಗು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಜೊತೆಗೆ ಕಳೆದ ಕೆಲವು ದಿನಗಳಿಂದ ಕಾರ್ಯಕರ್ತರು ಕಾಲನಿ ನಿವಾಸಿಗಳಿಗೆ ಜಾಗೃತಿ ಮೂಡಿಸುವ ಜೊತೆಗೆ ಸಾನಿಟೈಸೇಶನ್ ಮೂಲಕ ಸ್ವಚ್ಚತೆಗೆ ನೆರವಾಗುತ್ತಿರುವುದು ಗಮನ ಸೆಳೆದಿದೆ. ಕಾಲನಿಯನ್ನೊಳಗೊಂಡ ಸಾರ್ವಜನಿಕ ಸ್ಥಳಗಳನ್ನು ಅಣುವಿಮುಕ್ತಿಗೊಳಿಸಿ, ಸೂಕ್ತ ಆರೋಗ್ಯ ಸಲಹೆಗಳನ್ನು ನೀಡುತ್ತಿದ್ದು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅತಿ ದೊಡ್ಡ ಕೊರಗ ಕಾಲನಿಯಾಗಿರುವ ಈ ಕಾಲನಿಯಲ್ಲಿ 60ಕ್ಕಿಂತಲೂ ಮಿಕ್ಕಿದ ಕುಟುಂಬಗಳು ವಾಸಿಸುತ್ತಿದ್ದು, ಆಧುನಿಕ ಸಾಮಾಜಿಕ ವ್ಯವಸ್ಥೆಗಳು ಇಲ್ಲಿ ಕಾಲೂರತೊಡಗಿದ್ದಷ್ಟೆ. ಹಳೆ ತಲೆಮಾರಿನ ಮಂದಿ ಪಾರಂಪರಿಕ ವೃತ್ತಿಯನ್ನೇ ನಿರ್ವಹಿಸುತ್ತಿದ್ದು, ಕೋವಿಡ್ ಆತಂಕದ ವೇಳೆ ಹಿರಿಯ ವ್ಯಕ್ತಿಗಳಿಗೆ ಅದರ ಕಳವಳಗಳು ಹೆಚ್ಚು ಗಮನಕ್ಕೆ ಬಂದಂತಿಲ್ಲ.
ಜೊತೆಗೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತಗಳ ಅಧಿಕಾರಿಗಳು ಮಲೆಯಾಳಿಗರೇ ಆಗಿರುವುದರಿಂದ ಕಾಲನಿ ನಿವಾಸಿಗಳಿಗೆ ಸಂವಹನ ತೊಡಕುಗಳಾಗುತ್ತಿದ್ದು, ಸೇವಾ ಭಾರತಿ ಇಂತಹ ಕ್ಲಿಷ್ಟ ಸನ್ನಿವೇಶಗಳಲ್ಲಿ ನಿರಂತರವಾಗಿ ಕಾಲನಿ ನಿವಾಸಿಗಳೊಂದಿಗಿದ್ದಾರೆ.