ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಆಸ್ಪತ್ರೆಯಲ್ಲಿ ವೈದ್ಯರು 60 ವರ್ಷದ ರೋಗಿಯೊಬ್ಬರ ಮೆದುಳಿನಿಂದ ಬಾರೀ ಪ್ರಮಾಣದ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್‌ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಹೊರ ತೆಗೆದ ಫಂಗಸ್‌ನ ಪ್ರಮಾಣ ಕ್ರಿಕೆಟ್ ಚೆಂಡಿನ ಗಾತ್ರಕ್ಕೆ ಸಮವಾಗಿದ್ದು ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಹೊರತೆಗೆಯಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ರೋಗಿ ಜಾಮುಯ್ ಮೂಲದ ಅನಿಲ್ ಕುಮಾರ್ ಎಂದು ತಿಳಿದುಬಂದಿದ್ದು ಇತ್ತೀಚೆಗಷ್ಟೇ ಕೊರೊನಾವೈರಸ್‌ಗೆ ತುತ್ತಾಗಿ ಚೇತರಿಸಿಕೊಂಡಿದ್ದರು. ಆದರೆ ನಂತರ ಅದಾದ ನಂತರ ಬ್ಲ್ಯಾಕ್‌ಫಂಗಸ್‌ನ ಲಕ್ಷಣಗಳು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ಬ್ಲ್ಯಾಕ್‌ಫಂಗಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ನಂತರ ರೋಗಿಯ ಸ್ಥಿತಿ ಸ್ಥಿರವಾಗಿದೆ.
ರೋಗಿ ಅನಿಲ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ಡಾ. ಮನೀಶ್ ಮಂಡಲ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮೂಗಿನ ಮೂಲಕ ಈ ಫಂಗಸ್ ಅನಿಲ್ ಅವರಿಗೆ ಹರಡಿದೆ. ಆದರೆ ಅದು ಕಣ್ಣಿಗೆ ಹರಡಿಲ್ಲ ಎಂದು ತಿಳಿಸಿದ್ದಾರೆ. ಇಂಥಾ ಸಂದರ್ಭದಲ್ಲಿ ಬಹುತೇಕ ರೋಗಿಗಳ ಕಣ್ಣುಗಳು ಹಾನಿಯಾಗುತ್ತಿದ್ದು ಅದೃಷ್ಟವಶಾತ್ 60 ವರ್ಷದ ಅನಿಲ್ ಕುಮಾರ್ ಅವರ ಕಣ್ಣುಗಳು ಸುರಕ್ಷಿತವಾಗಿದೆ.
ಬಿಹಾರದಲ್ಲಿ 500ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದೆ. ಮೇ 22ರಂದು ಬಿಹಾರ ಸರ್ಕಾರ ಈ ಬ್ಲ್ಯಾಕ್ ಫಂಗಸ್‌ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ.
ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಒಟ್ಟು 2100 ಜನರು ಬಲಿಯಾಗಿದ್ದಾರೆ ಎಂಬ ಅಂಕಿಅಂಶ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಅವಧಿಯಲ್ಲಿ ದೇಶದಲ್ಲಿ ಒಟ್ಟು ಫಂಗಸ್ ಪ್ರಕರಣ 150 ಶೇಕಡಾದಷ್ಟು ಹೆಚ್ಚಾಗಿದೆ. ದೇಶದ ಎಲ್ಲಾ ಬೇರೆ ಬೇರೆ ಭಾಗಗಳಲ್ಲಿ ಕಳೆದ ಮೂರು ವಾರಗಳ ಅಂತರದಲ್ಲಿ 31,216 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಈ ಸಂದರ್ಭದಲ್ಲಿ 2109 ಜನರು ಇದಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣದ ಹೆಚ್ಚಳಕ್ಕೆ ಚಿಕಿತ್ಸೆಗೆ ಅತ್ಯಂತ ಅಗತ್ಯವಾಗಿರುವ ಆಂಫೊಟೆರಿಸಿನ್-ಬಿ ಲಸಿಕೆಯ ಕೊರತೆಯೇ ಕಾರಣ ಎನ್ನಲಾಗಿದೆ.