ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರವು ಎಲ್ಲಾ ರೀತಿಯ ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯ ಜಾರಿಗೆ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಮಾದಕವಸ್ತುಗಳ ವ್ಯಸನವನ್ನು ತೊಡೆದುಹಾಕಲು ಮಾದಕ ವಸ್ತು ನಿಯಂತ್ರಕ ಸಂಸ್ಥೆ (ಎನ್'ಸಿಬಿ)ಯ ಶ್ರಮವನ್ನು ಶ್ಲಾಘಿಸಿದ್ದಾರೆ.
ಇಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಗುತ್ತಿದ್ದು, ಎಲ್ಲಾ ರೀತಿಯ ಮಾದಕವಸ್ತುಗಳ ವಿರುದ್ಧ ಶೂನ್ಯ-ಸಹಿಷ್ಣು ನೀತಿಯ ಬಗೆಗಿನ ತನ್ನ ಬದ್ಧತೆಯನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪುನರುಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ' ವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅನುಮತಿಯೊಂದಿಗೆ 1989 ರ ಜೂನ್ 26 ರಂದು ಮೊದಲು ಆರಂಭಿಸಲಾಯಿತು. ಮಾದಕ ದ್ರವ್ಯಗಳ ಬಳಕೆ ಮತ್ತು ಸಾಗಾಟದ ನಿಷೇಧವೇ ಈ ದಿನದ ಗುರಿಯಾಗಿದೆ.