ಸಿಲಿಗುರಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗ ಬಹುತೇಕ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆದರೆ ಯಾವುದೇ ಸಾವು ವರದಿಯಾಗಿಲ್ಲ. ತಿಂಡಾರಿಯಾ ಬಳಿಯ ಗೈರಿಗಾಂವ್ ಪ್ರದೇಶಗಳಲ್ಲಿ ಹೆದ್ದಾರಿಯ ಸುಮಾರು 40 ಮೀಟರ್ ಪ್ರದೇಶವು ಭೂ ಕುಸಿತಕ್ಕೆ ಸಿಲುಕಿ ಹಾನಿಗೊಂಡಿದೆ.
ಇದರಿಂದಾಗಿ ಸಿಲಿಗುರಿ ಮತ್ತು ಡಾರ್ಜಿಲಿಂಗ್ ಅನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ರಸ್ತೆಯ ಮೂಲಕ ಸಂಪರ್ಕವನ್ನು ಮತ್ತೆ ಆರಂಭಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ಡಾರ್ಜಿಲಿಂಗ್‌ಗೆ ಪ್ರಮುಖ ವಾಹನ ಸಂಪರ್ಕ ಕಡಿತವಾದಂತಾಗಿದೆ. ಆದರೆ ರೋಹಿಣಿ ಮೂಲಕ ಬಳಸು ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.