ತಿರುವನಂತಪುರಂ: ಪತ್ನಿ ವಿಸ್ಮಯ ವಿ ನಾಯರ್ ಸಾವಿನ ಪ್ರಕರಣದಲ್ಲಿ ಬಂಧನವಾಗಿರುವ ಸಹಾಯಕ ಮೋಟಾರು ವಾಹನ ನಿರೀಕ್ಷಕರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಕೇರಳ ಸಾರಿಗೆ ಸಚಿವ ಆಂಟೋನಿ ರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಕೊಲ್ಲಂ ಮೋಟಾರು ವಾಹನ ಜಾರಿ ಇಲಾಖೆಯಿಂದ ಸಹಾಯಕ ಇನ್ಸ್ಪೆಕ್ಟರ್ ಕಿರಣ್ಕುಮಾರ್ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಿರಣ್ ಪತ್ನಿ ವಿಸ್ಮಯ ನಿಲಮೇಲ್ ಮೂಲದವರು. ಸಾಸ್ಥಮಕೋಟದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವರದಕ್ಷಿಣೆಗಾಗಿ ಕಿರಣ್ ಮೃಗೀಯವಾಗಿ ಹಿಂಸೆ ನೀಡಿದ್ದನು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ. ಅಲ್ಲದೆ, ಕಿರಣ್ ಅಮಾನವೀಯವಾಗಿ ಥಳಿಸಿ, ಗಾಯಗೊಳಿಸಿರುವ ತನ್ನ ಫೋಟೋಗಳನ್ನು ವಿಸ್ಮಯ ತವರು ಮನೆಗೆ ವಾಟ್ಸ್ಆಯಪ್ ಮಾಡಿದ್ದಳು.
ಇನ್ನು ಘಟನೆ ನಡೆದ ಬೆನ್ನಲ್ಲೇ ಕಿರಣ್ ಕುಮಾರ್ ಪರಾರಿಯಾಗಿದ್ದ. ಆದರೆ, ಸೋಮವಾರ ರಾತ್ರಿ ಕಿರಣ್ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ದಿನ ರಾತ್ರಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪತ್ನಿಗೆ ಚಿತ್ರಹಿಂಸೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ತನಿಖೆ ಮುಂದುವರಿದಿದೆ.