ಲಖನೌ: ಈ ಕರೊನಾ ಸಮಯದಲ್ಲಿ ಅದೆಷ್ಟೋ ಜನರು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅದೊಂದು ಗ್ರಾಮದಲ್ಲಿ ಊರವರ ಬಳಿಯೆಲ್ಲ ಹಣ ಸಂಗ್ರಹಿಸಿ ಕರೊನಾ ಮಾತಾ ದೇಗುಲವನ್ನೇ ನಿರ್ಮಿಸಲಾಗಿದೆ. ಆದರೆ ಇನ್ನೂ ವಿಶೇಷವೆಂದರೆ ದೇಗುಲ ನಿರ್ಮಾಣವಾದ ಐದೇ ದಿನಗಳಲ್ಲಿ ನೆಲಸಮ ಆಗಿದೆ ಕೂಡ.
ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ ಜುಹಿ ಶುಕ್ಲಾಪುರ ಗ್ರಾಮದಲ್ಲಿ ಕರೊನಾ ಮಾತಾ ದೇವಾಲಯವನ್ನು ನಿರ್ಮಿಸಲಾಗಿತ್ತು. ಲೋಕೇಶ್ ಕುಮಾರ್ ಹೆಸರಿನ ವ್ಯಕ್ತಿ, ಊರವರಿಂದ ಹಣ ಸಂಗ್ರಹಿಸಿ, ತಮ್ಮ ಜಾಗದಲ್ಲಿ ದೇಗುಲ ನಿರ್ಮಿಸಿದ್ದರಂತೆ. ಜೂನ್ 7ರಂದು ದೇಗುಲ ಉದ್ಘಾಟನೆ ಮಾಡಿ, ಅಲ್ಲಿ ಪ್ರತಿದಿನ ಪೂಜೆ ಮಾಡಲು ಪೂಜಾರಿಯನ್ನೂ ನೇಮಿಸಲಾಗಿತ್ತಂತೆ. ಪ್ರತಿದಿನ ಗ್ರಾಮದ ಮತ್ತು ಅಕ್ಕ ಪಕ್ಕದ ಗ್ರಾಮದ ನೂರಾರು ಜನರು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರಂತೆ.
ಆದರೆ ಈಗ ದೇಗುಲ ಕಟ್ಟಲಾಗಿರುವ ಸ್ಥಳ ಕೇವಲ ಲೋಕೇಶ್ ಹೆಸರಿನಲ್ಲಿ ಇಲ್ಲ. ನಾಗೇಶ್ ಮತ್ತು ಜೈ ಪ್ರಕಾಶ್ ಹೆಸರಿನ ವ್ಯಕ್ತಿಗಳೂ ಅದರಲ್ಲಿ ಪಾಲು ಹೊಂದಿದ್ದಾರೆ. ಆದರೆ ಅವರಿಬ್ಬರ ಅನುಮತಿ ಪಡೆಯದೆಯೇ ದೇಗುಲ ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ನಾಗೇಶ್ ಪೊಲೀಸ್ ದೂರನ್ನೂ ದಾಖಲಿಸಿದ್ದಾನೆ. ಅದೇ ಕಾರಣಕ್ಕೆ ಪೊಲೀಸರೇ ಬಂದು ದೇಗುಲವನ್ನು ನೆಲಸಮ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಒಟ್ಟಿನಲ್ಲಿ ಕರೊನಾ ದೇಗುಲವೆಂಬ ಮೂಢನಂಬಿಕೆಗೆ ಶುಕ್ರವಾರ ರಾತ್ರಿ ತೆರೆ ಬಿದ್ದಿದೆ.