ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆ ನಗರವು ಭಾರತದ ಅದ್ಭುತ ಸಂಪ್ರದಾಯಗಳ ದ್ಯೋತಕದಂತಿರಬೇಕು. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಸಾಂಸ್ಕೃತಿಕ ಧರ್ಮಪ್ರಜ್ಞೆಯ ಪ್ರತಿರೂಪದಂತಿರಬೇಕು ಎಂದಿದ್ದಾರೆ.
ಅಯೋಧ್ಯೆಯ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಶನಿವಾರ ಸಭೆ ನಡೆಸಿದ ಪಿಎಂ ಮೋದಿ, ಅಯೋಧ್ಯೆ ನಗರವು ನಮ್ಮ ಅಭಿವೃದ್ಧಿಯ ರೂಪಾಂತರವನ್ನು ತೋರಿಸುವಂತಿರಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆ ನಗರವನ್ನು ರಾಷ್ಟ್ರದ ಭಕ್ತಿಯ ಕೇಂದ್ರ, ಜಾಗತಿಕ ಪ್ರವಾಸಿ ತಾಣ ಮತ್ತು ಅತ್ಯದ್ಭುತ ಸ್ಮಾರ್ಟ್ ಸಿಟಿಯನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಪ್ರಧಾನಿ ಕಚೇರಿ ಸಭೆಯಲ್ಲಿ ಹೇಳಿಕೆ ನೀಡಿದೆ.
ಅಯೋಧ್ಯೆ ನಗರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಮೋದಿ ತಿಳಿಸಿದ್ದಾರೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದ ವಿಸ್ತರಣೆ, ಬಸ್ ನಿಲ್ದಾಣ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆ.
ಭಕ್ತರಿಗೆ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ, ಆಶ್ರಮಕ್ಕೆ ಜಾಗ, ವಿವಿಧ ರಾಜ್ಯಗಳ ಹೋಟೆಲ್, ಭವನಗಳ ನಿರ್ಮಾಣ, ಪ್ರವಾಸಿಗರಿಗೆ ಅನುಕೂಲಕರ ವ್ಯವಸ್ಥೆ, ವಿಶ್ವದರ್ಜೆಯ ಮ್ಯೂಸಿಯಂ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಅಯೋಧ್ಯೆ ಸಿಟಿಯಲ್ಲಿ ಕೈಗೊಳ್ಳುವ ಬಗ್ಗೆ ಹೇಳಿದರು.