ಬೆಂಗಳೂರು: ಬಾಹ್ಯಾಕಾಶದ ಕೌತುಕಗಳ ಬಗ್ಗೆ ನಿರಂತರವಾಗಿ ಅಧ್ಯಯನ ಕೈಗೊಳ್ಳುತ್ತಾ ಜಗತ್ತಿಗೆ ಹೊಸ ವಿಷಯಗಳನ್ನು ತಿಳಿಸುವಲ್ಲಿ ಅಮೆರಿಕದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ 'ನಾಸಾ' ಸದಾ ಮುಂದು.
ಇದೀಗ ನಾಸಾ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯದ್ಭುತ ಮೂರು ಗ್ಯಾಲಕ್ಸಿಗಳು (ನಕ್ಷತ್ರಪುಂಜ) ಇರುವ ಚಿತ್ರವನ್ನು ಬಿಡುಗಡೆ ಮಾಡಿದ್ದು, ಅವುಗಳ ಬಗ್ಗೆ ಜನಸಾಮಾನ್ಯರಿಗೆ ವಿವರಣೆಯನ್ನೂ ಸಹ ನೀಡಿದೆ.
ಜೂನ್ 13 ರಂದು ನಾಸಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ. ಯಾಕೆ ಈ ಮೂರೂ ಗ್ಯಾಲಾಕ್ಸಿಗಳು ಒಂದೇ ರೀತಿಯಾಗಿವೆ ಮತ್ತು ಅನನ್ಯವಾಗಿವೆ? ಎಂಬುದನ್ನು ಬಹಳ ಸೊಗಸಾಗಿ ವಿವರಿಸಿದೆ.
ಚಿತ್ರದಲ್ಲಿ ಕಾಣುವಂತೆ, ಒಂದು ಗ್ಯಾಲಾಕ್ಸಿ ಚಿತ್ರದ ಕೇಂದ್ರ ಭಾಗದ ಬಲಬಾಗದಲ್ಲಿ ಮತ್ತು ಇನ್ನೆರೆಡು ಗ್ಯಾಲಾಕ್ಸಿ ಚಿತ್ರದ ಕೆಳಭಾಗದ ಸಂಪೂರ್ಣ ಬಲಭಾಗದಲ್ಲಿ ಕಂಡು ಬರುತ್ತಿವೆ.
ಈ ಸುಂದರ ಚಿತ್ರವನ್ನು ನಾಸಾದ ಹಬಲ್ ಟೆಲಿಸ್ಕೋಪ್‌ನ ವೈಡ್ ಫೀಲ್ಡ್ ಕ್ಯಾಮೆರಾ-3 ಸೆರೆ ಹಿಡಿದಿದೆ.
'ಈ ಚಿತ್ರದಲ್ಲಿರುವ ಮೂರು ಅಮೋಘ ಗ್ಯಾಲಾಕ್ಸಿಗಳನ್ನು ವರ್ಗಿಕರಿಸುವುದು ತುಂಬಾ ಕಠಿಣ. ಏಕೆಂದರೆ ಇವನ್ನು ನಮ್ಮದೇ ಕ್ಷೀರಪಥ ಗ್ಯಾಲಾಕ್ಸಿಯಂತೆ (MilkyWay) ಸುರುಳಿಯಾಕಾರದ ಗ್ಯಾಲಾಕ್ಸಿಗಳೆಂದು ವರ್ಗೀಕರಿಸಲಾಗಿದೆ, ಅಲ್ಲದೇ ಕೆಲವೊಮ್ಮೆ ಲೆಂಟಿಕ್ಯುಲರ್ ಗ್ಯಾಲಕ್ಸಿ (ಕಣ್ಣಿನ ಗುಡ್ಡೆಯಾಕಾರದ) ಎಂದೂ ವರ್ಗೀಕರಿಸಲಾಗುತ್ತದೆ' ಎಂದು ನಾಸಾ ಹೇಳಿದೆ.
ಲೆಂಟಿಕ್ಯುಲರ್ ಗ್ಯಾಲಕ್ಸಿಗಳು ಸುರುಳಿಯಾಕಾರದ ಮತ್ತು ಅಂಡಾಕಾರದ ಪ್ರಭೇದಗಳ ನಡುವೆ ಇರುವ ಗ್ಯಾಲಕ್ಸಿ ಪ್ರಕಾರವಾಗಿದೆ ಎಂದು ನಾಸಾ ಹೇಳಿದೆ.
'ಈ ಗ್ಯಾಲಾಕ್ಸಿಗಳ ಸುರುಳಿಯಾಕಾರದ ತೋಳುಗಳು ಪ್ರತ್ಯೇಕವಾಗಿದ್ದರೂ, ಅವುಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಈ ಚಿತ್ರದಲ್ಲಿ ಗ್ಯಾಲಾಕ್ಸಿಗಳ ಒಂದು ತೋಳಿನ ತುದಿ ಹರಡಿರುವುದು ಕಂಡುಬರುತ್ತದೆ' ಎಂದು ನಾಸಾ ಹೇಳುತ್ತದೆ.
ಗ್ಯಾಲಾಕ್ಸಿಗಳು ನಮ್ಮಂತೆಯೇ ಬೆಳೆಯುತ್ತವೆ. ಅವುಗಳ ರೂಪ ಅವುಗಳ ಜೀವಿತಾವಧಿಯಲ್ಲಿ ಬದಲಾಗಬಹುದು. ಸುರುಳಿಯಾಕಾರದ ಗ್ಯಾಲಾಕ್ಸಿಗಳು ಅಂಡಾಕಾರವಾಗಿ ವಿಕಸನಗೊಳ್ಳುತ್ತವೆ ಎಂದು ಭಾವಿಸಲಾಗಿದೆ. ಒಂದಕ್ಕೊಂದು ವಿಲೀನಗೊಳ್ಳುವ ಮೂಲಕ ಇದು ಸಂಭವಿಸಬಹುದು. ಇದರಿಂದಾಗಿ ಅವುಗಳು ತಮ್ಮ ವಿಶಿಷ್ಟ ಸುರುಳಿಯಾಕಾರದ ರಚನೆಯನ್ನು ಕಳೆದುಕೊಳ್ಳುತ್ತವೆ ಎಂದು ನಾಸಾ ಹೇಳಿದೆ.
ನಾಸಾ ಇದೇ ಚಿತ್ರವನ್ನು ಟ್ವಿಟರ್‌ನಲ್ಲಿಯೂ ಹಂಚಿಕೊಂಡಿದೆ. ಖಗೋಳಯಾನ ಕುತೂಹಲಿಗಳು ಈ ಚಿತ್ರಕ್ಕೆ ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದು, 'ಈ ಮೂರು ಗ್ಯಾಲಾಕ್ಸಿಗಳಿಗೆ ನಾಸಾ ಎಂದಾದರೂ ತನ್ನ ಗಗನಯಾತ್ರಿಯನ್ನು ಕಳಿಸುತ್ತದಾ' ಎಂದು ಕೇಳಿದ್ದಾರೆ.