HEALTH TIPS

ಬ್ಯಾಂಕ್ ವಹಿವಾಟುಗಳನ್ನು ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿಸುವುದು ಹೇಗೆ?

        ತಂತ್ರಜ್ಞಾನವು ಇಂದು ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಶಾಪಿಂಗ್,ದಿನಸಿ ಖರೀದಿ,ಬಿಲ್ ಪಾವತಿಗಳು ಇತ್ಯಾದಿಗಳು ಡಿಜಿಟಲ್ ವಿಧಾನದ ಮೂಲಕವೇ ನಡೆಯುತ್ತಿವೆ. ಇದರೊಂದಿಗೆ ಭಾರತದ ಆರ್ಥಿಕತೆಯು ನಗದು ವಹಿವಾಟಿನಿಂದ ಡಿಜಿಟಲ್ ವಹಿವಾಟಿನೆಡೆಗೆ ಕ್ಷಿಪ್ರವಾಗಿ ಸಾಗುತ್ತಿದೆ ಮತ್ತು ಇದೇ ವೇಳೆ ದೇಶವು ಸೈಬರ್ ದಾಳಿಗಳಿಗೆ ಸುಲಭಭೇದ್ಯವಾಗುತ್ತಿದೆ. ಗ್ರಾಹಕರಿಗೆ ವಹಿವಾಟುಗಳನ್ನು ಸುಗಮವಾಗಿಸಲು ಡಿಜಿಟಲ್ ಪಾವತಿಗಾಗಿ ಬ್ಯಾಂಕುಗಳು ಡಿಜಿಟಲ್ ವೇದಿಕೆಗಳನ್ನು ಏಕೀಕೃತಗೊಳಿಸಿವೆ ಮತ್ತು ಇದರೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈಬರ್ ವಂಚನೆಗಳೂ ಹೆಚ್ಚುತ್ತಿವೆ.

          ಬ್ಯಾಂಕುಗಳು ತಾಂತ್ರಿಕವಾಗಿ ಮುಂದುವರಿದಿರುವುದು ಬ್ಯಾಂಕಿಂಗ್ ಅನುಭವವನ್ನು ಹೆಚ್ಚು ಹಿತಕರವನ್ನಾಗಿಸಿದೆಯಾದರೂ ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳೂ ಅದೇ ಪ್ರಮಾಣದಲ್ಲಿ ಏರುತ್ತಿವೆ. ಮಾಧ್ಯಮ ವರದಿಯಂತೆ ಎಪ್ರಿಲ್ 2009ರಿಂದ ಸೆಪ್ಡೆಂಬರ್ 2019ರವರೆಗಿನ ಅವಧಿಯಲ್ಲಿ ದೇಶದಲ್ಲಿ 1.17 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ ಒಟ್ಟು 615.39 ಕೋ.ರೂ.ಗಳನ್ನು ಹ್ಯಾಕರ್‌ಗಳು ಎಗರಿಸಿದ್ದಾರೆ. ಕೆಲವು ಸೈಬರ್ ವಂಚನೆ ವಿಧಾನಗಳು ಮತ್ತು ಅವುಗಳಿಂದ ಪಾರಾಗಲು ನಾವು ವಹಿಸಬಹುದಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿಗಳು ಇಲ್ಲಿವೆ....

► ಕ್ರೆಡಿಟ್ ಕಾರ್ಡ್ ವಂಚನೆ

ಅತ್ಯಂತ ಸಾಮಾನ್ಯ ಸ್ಕಾಮಿಂಗ್ ವಂಚನೆಗಳಲ್ಲಿ ಅನಧಿಕೃತ ವಹಿವಾಟುಗಳಿಗೆ ಸುಲಭಭೇದ್ಯವಾಗಿರುವ ಕ್ರೆಡಿಟ್ ಕಾರ್ಡ್‌ಗಳು ಸೇರಿವೆ. ಯಾವುದೇ ವಂಚನೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕ್ರೆಡಿಟ್ ಕಾರ್ಡ್ ಬಳಕೆದಾರರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಬಳಕೆದಾರರು ತಮ್ಮ ಪಿನ್,ಕಾರ್ಡ್ ವಿವರಗಳು ಮತ್ತು ಲಾಗ್-ಇನ್ ವಿವರಗಳ ಗೋಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಕ್ರೆಡಿಟ್ ಕಾರ್ಡ್‌ನ್ನು ಬಳಸುತ್ತಿಲ್ಲವಾದರೆ ಆನ್ ಲೈನ್ ವಹಿವಾಟುಗಳಿಗೆ ಅದನ್ನು ನಿಷ್ಕ್ರಿಯಗೊಳಿಸಬೇಕು ಮತ್ತು ಅಗತ್ಯವಿದ್ದಾಗ ಅದನ್ನು ಕ್ರಿಯಾಶೀಲಗೊಳಿಸಬೇಕು. ಲಾಗ್-ಇನ್ ವಿವರಗಳು ಮತ್ತು ಕಾರ್ಡ್ ನಂಬರ್‌ಗಳಂತಹ ಮಾಹಿತಿಗಳ ಕಳ್ಳತನವಾಗುವ ಸಾಧ್ಯತೆಯಿರುವುದರಿಂದ ಸುರಕ್ಷಿತವಲ್ಲದ ಮತ್ತು ಅಪರಿಚಿತ ಜಾಲತಾಣಗಳಲ್ಲಿ ಆನ್‌ಲೈನ್ ವಹಿವಾಟುಗಳಿಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಕೂಡದು.

► ಇ-ಮೇಲ್ ಫಿಷಿಂಗ್

ಹೆಚ್ಚಿನ ಜನರು ತಮ್ಮ ಮಾಹಿತಿಗಳನ್ನು ತಮ್ಮ ಕಂಪ್ಯೂಟರ್ ಅಥವಾ ಕ್ಲೌಡ್‌ನಲ್ಲಿ ಸ್ಟೋರ್ ಮಾಡಿರುತ್ತಾರೆ ಮತ್ತು ಇದು ಕೆಲವು ಅಪಾಯಗಳನ್ನೊಳಗೊಂಡಿರುತ್ತದೆ,ಹೀಗಾಗಿ ಗ್ರಾಹಕರು ಪ್ರಬಲ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಪರಿಚಿತ ಮೂಲಗಳಿಂದ ಬರುವ ಇ-ಮೇಲ್‌ಗಳಲ್ಲಿಯ ಲಿಂಕ್‌ಗಳನ್ನು ಕ್ಲಿಕ್ಕಿಸದಿರುವುದು ಗೌಪ್ಯ ಮಾಹಿತಿಗಳನ್ನು ರಕ್ಷಿಸಿಕೊಳ್ಳುವ ಪರಿಣಾಮಕಾರಿ ಮಾರ್ಗಗಳಲ್ಲೊಂದಾಗಿದೆ. ಬಳಕೆದಾರರು ಅಸುರಕ್ಷಿತ ವೆಬ್‌ಪೇಜ್‌ಗಳಿಗೆ ಭೇಟಿ ನೀಡುವಂತೆ ಮಾಡಲು ಫಿಷರ್‌ಗಳು ಸಾಮಾನ್ಯವಾಗಿ ಅಸಲಿ ವೆಬ್‌ಸೈಟ್‌ಗಳಿಗೆ ಹೋಲುವ ಲಿಂಕ್‌ಗಳನ್ನು ಅಳವಡಿಸುವುದರಿಂದ ಯಾವುದೇ ಲಿಂಕ್‌ನ್ನು ತೆರೆಯುವ ಮುನ್ನ ಯುಆರ್‌ಎಲ್‌ನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು.

► ಪಾಸ್‌ವರ್ಡ್ ಬಳಕೆ

ಯಾವುದೇ ಕಾರಣಕ್ಕೂ ಗ್ರಾಹಕರು ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ನಂತಹ ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿಗಳನ್ನು ವೆಬ್ ಬ್ರೌಸರ್‌ನಲ್ಲಿ ಸೇವ್ ಮಾಡಬಾರದು,ಇದು ಗ್ರಾಹಕರನ್ನು ಬ್ಯಾಂಕಿಂಗ್ ವಂಚನೆಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ನಾವು ಜಾಲತಾಣಕ್ಕೆ ಭೇಟಿ ನೀಡಿದಾಗ ಬಳಕೆದಾರರು ಮುಂದಿನ ಸಲ ಆಟೋಮ್ಯಾಟಿಕ್ ಆಗಿ ಲಾಗ್ ಆಗಲು ಪಾಸ್‌ವರ್ಡ್‌ನ್ನು ನೆನಪಿಡಬೇಕೇ ಅಥವಾ ಸ್ಟೋರ್ ಮಾಡಬೇಕೇ ಎಂದು ಕೇಳುತ್ತದೆ. ಈ ಸೌಲಭ್ಯದಿಂದಾಗಿ ಬಳಕೆದಾರರು ಪ್ರತಿಸಲವೂ ಲಾಗ್-ಇನ್ ಆಗಬೇಕಿದ್ದರೆ ತಮ್ಮ ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಟೈಪ್ ಮಾಡುವ ಅಗತ್ಯವಿರುವುದಿಲ್ಲ. ಇದೇ ವೇಳೆ ಈ ಸೌಲಭ್ಯವು ಮೂರನೇ ವ್ಯಕ್ತಿಗೆ ಬಳಕೆದಾರನ ಖಾತೆಯನ್ನು ಪ್ರವೇಶಿಸುವುದನ್ನು ಹೆಚ್ಚು ಸುಲಭವಾಗಿಸುತ್ತದೆ. ಸಾಮಾನ್ಯವಾಗಿ ಬೇರೆ ಯಾರಾದರೂ ಬಳಕೆದಾರನ ಸಾಧನವನ್ನು ಬಳಸಿದಾಗ ಅಥವಾ ಸಾಧನವು ಕಳೆದುಹೋದಾಗ ಅಥವಾ ಕಳ್ಳತನವಾದಾಗ ಈ ಅಪಾಯವಿರುತ್ತದೆ.

► ಗೌಪ್ಯ ಮಾಹಿತಿಗಳ ರಕ್ಷಣೆ ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ ಗ್ರಾಹಕರಿಗೆ ಸೈಬರ್ ಕ್ರಿಮಿನಲ್‌ಗಳು ಬಳಸುವ ಸಾಮಾನ್ಯ ಫಿಷಿಂಗ್ ತಂತ್ರಗಳ ಅರಿವಿರಬೇಕಾಗುತ್ತದೆ. ಅವರು ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು,ಆನ್‌ಲೈನ್ ಬ್ಯಾಂಕಿಂಗ್ ವಿವರಗಳು,ಖಾತೆಯ ವಿವರಗಳು, ಯೂಸರ್‌ನೇಮ್‌ಗಳು ಅಥವಾ ಪಾಸ್‌ವರ್ಡ್‌ಗಳಂತಹ ಬಳಕೆದಾರರ ಗೌಪ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ನಾನಾ ವಂಚನೆ ತಂತ್ರಗಳನ್ನು ಬಳಸುವ ಮೂಲಕ ಪ್ರಯತ್ನಿಸುತ್ತಿರುತ್ತಾರೆ. ವಂಚಕರು ಸಾಮಾನ್ಯವಾಗಿ ಪ್ರತಿಷ್ಠಿತ ಸಂಸ್ಥೆಗಳು ಅಥವಾ ಬಳಕೆದಾರರ ಬ್ಯಾಂಕಿನ ಪ್ರತಿನಿಧಿಗಳ ಸೋಗಿನಲ್ಲಿ ಎಟಿಎಂ ಅಥವಾ ಕ್ರೆಡಿಟ್ ಕಾರ್ಡ್‌ನ ಪಿನ್,ಅದರ ಎಕ್ಸ್‌ಪೈರಿ ದಿನಾಂಕ,ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಕೇಳುತ್ತಾರೆ. ಫಿಷಿಂಗ್ ದಾಳಿಗಳಿಂದ ಖಾತೆಗಳನ್ನು ರಕ್ಷಿಸಿಕೊಳ್ಳಲು ಬಳಕೆದಾರರು ಅಪರಿಚಿತ ಕರೆಗಳು ಮತ್ತು ಸಂದೇಶಗಳಿಂದ ದೂರವಿರಬೇಕು. ಯಾವುದೇ ಬ್ಯಾಂಕ್ ತನ್ನ ಗ್ರಾಹಕರಿಂದ ಇಂತಹ ವಿವರಗಳನ್ನು ಕೇಳುವುದಿಲ್ಲ,ಹೀಗಾಗಿ ಬಳಕೆದಾರರು ಯಾವುದೇ ಕಾರಣಕ್ಕೂ ಲಾಗಿನ್ ಮತ್ತು ಒಟಿಪಿ ಸೇರಿದಂತೆ ಮಹತ್ವದ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.

► ಸೆಕ್ಯೂರಿಟಿ ಕೋಡ್

ಪ್ರತಿಯೊಂದೂ ವಂಚನೆ ಪ್ರಕರಣವು ಬಳಕೆದಾರನ ಮಾಹಿತಿಯನ್ನು ಕದಿಯುವುದರೊಂದಿಗೆ ಆರಂಭವಾಗುತ್ತದೆ. ಇದನ್ನು ತಡೆಯಲು ಬಳಕೆದಾರರು ಟು-ವೇ ಅಥವಾ ಮಲ್ಟಿ-ಫ್ಯಾಕ್ಟರ್ ದೃಢೀಕರಣವನ್ನು ಅಳವಡಿಸಿಕೊಳ್ಳಬೇಕು. ಮಲ್ಟಿ-ಫ್ಯಾಕ್ಟರ್ ದೃಢೀಕರಣವು ಇಂತಹ ವಂಚನೆಗಳ ವಿರುದ್ಧ ಪರಿಣಾಮಕಾರಿ ರಕ್ಷಣಾ ತಂತ್ರವಾಗಿದೆ.

► ವೈ-ಫೈ ಬಳಕೆ

ಶಾಪಿಂಗ್ ಮಾಲ್‌ಗಳು,ಕಾಫಿ ಶಾಪ್‌ಗಳು,ಲೈಬ್ರರಿಗಳು,ಸಾರ್ವಜನಿಕ ಸಾರಿಗೆಗಳು ಇತ್ಯಾದಿಗಳಲ್ಲಿ ಲಭ್ಯ ಸಾರ್ವಜನಿಕ ವೈ-ಫೈ ಗ್ರಾಹಕರನ್ನು ತಮ್ಮ ಬಲೆಯಲ್ಲಿ ಸಿಲುಕಿಸಲು ಸೈಬರ್ ಖದೀಮರು ಬಳಸುವ ಇನ್ನೊಂದು ವಂಚನೆಯ ಅಸ್ತ್ರವಾಗಿದೆ. ಈ ನೆಟ್‌ವರ್ಕ್‌ಗಳನ್ನು ಲಕ್ಷಾಂತರ ಜನರು ಬಳಸುತ್ತಿರುತ್ತಾರೆ ಮತ್ತು ಇವುಗಳು ಸುರಕ್ಷಿತವಲ್ಲ ಎನ್ನುವುದನ್ನು ತಿಳಿದಿರುವುದು ಅಗತ್ಯವಾಗಿದೆ. ಹಲವಾರು ಬಳಕೆದಾರರ ಮಾಹಿತಿಗಳಿಗೆ ಪ್ರವೇಶವನ್ನು ಸಾಧ್ಯವಾಗಿಸುವ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಹ್ಯಾಕರ್‌ಗಳು ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ಹಲವಾರು ಹ್ಯಾಕರ್‌ಗಳು ಸಾರ್ವಜನಿಕರ 'ಅನುಕೂಲ 'ಕ್ಕಾಗಿ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸೃಷ್ಟಿಸಿರುತ್ತಾರೆ. ಇದರ ಮೂಲಕ ಬಳಕೆದಾರರ ಮಹತ್ವದ ಫೈಲ್‌ಗಳನ್ನು ಮತ್ತು ಮಾಹಿತಿಗಳನ್ನು ಕದ್ದು ವಂಚಿಸುತ್ತಾರೆ. ಬ್ಯಾಂಕಿಂಗ್ ವಿವರಗಳನ್ನು ಸಾರ್ವಜನಿಕ ನೆಟ್‌ವರ್ಕ್‌ನಲ್ಲಿ ಬಳಸುವುದು ಅಪಾಯಕಾರಿಯಾಗಿರುವುದರಿಂದ ಜವಾಬ್ದಾರಿಯುತ ಬಳಕೆದಾರರು ಯಾವುದೇ ಹಣಕಾಸು ವಹಿವಾಟು ನಡೆಸಲು ಸಾರ್ವಜನಿಕ ವೈ-ಫೈ ಬಳಸಬಾರದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries