ನವದೆಹಲಿ: ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದುಕೊಂಡು ಜನರ ಸಂಖ್ಯೆಯಲ್ಲಿ ಅಮೆರಿಕಾವನ್ನು ಭಾರತ ಹಿಂದಿಕ್ಕಿದೆ. ಮುಂಬರುವ ದಿನಗಳಲ್ಲಿ ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸರ್ಕಾರ ಶುಕ್ರವಾರ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ವಿಕೆ ಪೌಲ್, 60 ವರ್ಷಕ್ಕೂ ಮೇಲ್ಪಟ್ಟ ಜನರಲ್ಲಿ ಶೇ.43 ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 45 ವರ್ಷ ಮೇಲ್ಪಟ್ಟ ಶೇಕಡಾ 37 ರಷ್ಟು ಜನಸಂಖ್ಯೆ ಲಸಿಕೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಗುರುವಾರದ ourworldindata ಮಾಹಿತಿಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ 17.2 ಕೋಟಿ ಜನರು ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದರೆ ಅಮೆರಿಕಾದಲ್ಲಿ ಶೇ.16. 9 ಕೋಟಿ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಸಿಂಗಲ್ ಡೋಸ್ ಲಸಿಕೆ ಪಡೆದುಕೊಂಡ ಜನರ ಸಂಖ್ಯೆಯಲ್ಲಿ ಅಮೆರಿಕವನ್ನು ನಾವು ಹಿಂದಿಕ್ಕಿದ್ದೇವೆ ಎಂದರು.
ಲಸಿಕೆ ನೀಡಿಕೆಯಲ್ಲಿ ಸ್ಥಿರ ಪ್ರಗತಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದ ಪೌಲ್, ಹಿರಿಯ ನಾಗರಿಕರು ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ. ಮುಂಬರುವ ವಾರಗಳಲ್ಲಿ ಶೇ.50 ರಷ್ಟು ಜನರು ಲಸಿಕೆ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.
ಜಾಗತಿಕ ದತ್ತಾಂಶದ ಹಿನ್ನೆಲೆಯಲ್ಲಿ ಎರಡನೇ ತರಂಗ ಕ್ಷೀಣಿಸುತ್ತಿರುವಾಗ, ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 20,519 ಪ್ರಕರಣಗಳಿದ್ದರೆ, ವಿಶ್ವದ ಸರಾಸರಿ ಇನ್ನೂ 22,181 ರಷ್ಟಿದೆ. ದೇಶದಲ್ಲಿ ಪ್ರತಿ ಮಿಲಿಯನ್ ಗೆ 245 ಸಾವು ಪ್ರಕರಣಗಳಿದ್ದರೆ, ವಿಶ್ವದ ಸರಾಸರಿ 477 ಇದೆ. ದೇಶದ ಜನರು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲೆಗಳು, ಹಳ್ಳಿ, ಪಂಚಾಯತ್ ಮತ್ತು ಕುಟುಂಬಗಳ ಬಲವಾದ ಕ್ರಮಗಳಿಂದ ಈ ಪರಿಸ್ಥಿತಿಯನ್ನು ಸಾಧಿಸಲಾಗಿದೆ. ನಿರ್ಬಂಧ ತೆರವಾದರೂ ಜನರು ಶಿಸ್ತನ್ನು ಅನುಸರಿಸುವಂತೆ ಪೌಲ್ ಹೇಳಿದರು.
ದೈನಂದಿನ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದೆ. ಗರಿಷ್ಠ ಪ್ರಕರಣಗಳು ದಾಖಲಾದ ಮೇ 7 ರಿಂದಲೂ ಬಹುತೇಕ ಶೇ.68 ರಷ್ಟು ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಹೇಳಿದರು.