ತಿರುವನಂತಪುರ: ಆದಾಯ ಹೆಚ್ಚಿಸಲು ದೇವಸ್ವಂ ಮಂಡಳಿ ದೇವಾಲಯಗಳಿಗಾಗಿ ಯೂಟ್ಯೂಬ್ ಚಾನೆಲ್ ಯೋಜನೆಯನ್ನು ಪ್ರಾರಂಭಿಸಿದೆ. ಕೊರೋನದ ಬಳಿಕ ಆದಾಯದ ಕೊರತೆಯಿಂದಾಗಿ ಬಿಕ್ಕಟ್ಟಿನಲ್ಲಿರುವ ಮಂಡಳಿಯನ್ನು ಬೆಂಬಲಿಸುವ ಯೋಜನೆ ಎಂದು ದೇವಸ್ವಂ ಮಂಡಳಿ ಇಂತಹ ವ್ಯವಸ್ಥೆಗೆ ಮುಂದಾಗಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯಡಿ ಸುಮಾರು ಒಂದು ಸಾವಿರ ದೇವಾಲಯಗಳಿದ್ದರೂ, ಸಾಕಷ್ಟು ಪ್ರಚಾರ ಸಿಗುತ್ತಿಲ್ಲ ಎಂದು ಸಿಬ್ಬಂದಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ದೇವಾಲಯಗಳ ಸುದ್ದಿಗಳು ಅಗತ್ಯವಿದ್ದಾಗೆಲ್ಲ ಎಲ್ಲೆಡೆ ಲಭ್ಯವಿಲ್ಲ ಎಂದು ದೇವಸ್ವಂ ಅಧಿಕೃತರು ಬೊಟ್ಟುಮಾಡಿದ್ದಾರೆ.
ವಿವಿಧ ದೇವಾಲಯಗಳ ವಿಶೇಷ ಪೂಜೆಗಳು, ನಂಬಿಕೆಗಳು ಮತ್ತು ದಂತಕಥೆಗಳನ್ನು ಯೂಟ್ಯೂಬ್ ಮೂಲಕ ಭಕ್ತರಿಗೆ ತಲುಪಿಸಲು ಯೂಟ್ಯೂಬ್ ಚಾನೆಲ್ ಗಳು ನೆರವಾಗಲಿದೆ ಎಂದು ದೇವಸ್ವಂ ಮಂಡಳಿ ಅಂದಾಜಿಸಿದೆ. ಇದರೊಂದಿಗೆ ಲೈವ್ ಶೋ ಮತ್ತು ಅರ್ಪಣೆ ವ್ಯವಸ್ಥೆಯನ್ನು ಪರಿಚಯಿಸಿದರೆ ಆದಾಯ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಅರ್ಪಣೆಯ ಪ್ರಸಾದವನ್ನು ಭಕ್ತರಿಗೆ ನಿಖರವಾಗಿ ತಲುಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೊರಿಯರ್ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಕ್ರಮವೂ ಚಿಂತನೆಯಲ್ಲಿದೆ. ಇದಲ್ಲದೆ, ದೇವಾಲಯಗಳ ಪಕ್ಕದಲ್ಲಿರುವ 3,000 ಎಕರೆ ಭೂಮಿಯನ್ನು ಬಾಡಿಗೆಗೆ ನೀಡಿ ಆದಾಯವನ್ನು ಪಡೆಯಲು ಗುತ್ತಿಗೆ ನೀಡಲು ಮಂಡಳಿಯು ಯೋಜಿಸುತ್ತಿದೆ. ಪ್ರಸ್ತುತ ದೇವಸ್ವಂ ಮಂಡಳಿಯು ದೇವಾಲಯಗಳ ಸನಿಹದ ಕೊಠಡಿಗಳ ಬಾಡಿಗೆಯಿಂದ ಉತ್ತಮ ಆದಾಯವನ್ನು ಪಡೆಯುತ್ತದೆ. ಇನ್ನು ದೇವಾಲಯಗಳ ಭೂಮಿಯನ್ನು ಬಾಡಿಗೆಗೆ ನೀಡಲಾಗುತ್ತದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.