ಒಡಿಶಾ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿರುವ "ಪಿನಾಕಾ" ರಾಕೆಟ್‌ನ ಪರೀಕ್ಷಾರ್ಥ ಪ್ರಯೋಗವನ್ನು ಶುಕ್ರವಾರ ಒಡಿಶಾದ ಬಾಲಾಸೋರ್ ಜಿಲ್ಲೆಯ ಚಾಂದಿಪುರ್‌ನಲ್ಲಿ ಯಶಸ್ವಿಯಾಗಿ ನಡೆಸಿದೆ.
ಬಹುಹಂತದ ರಾಕೆಟ್ ಉಡಾವಣಾ ವಾಹಕದಿಂದ (MBRL) 25 ಪಿನಾಕಾ ರಾಕೆಟ್‌ಗಳ ಪ್ರಯೋಗವನ್ನು ಗುರುವಾರ ಮತ್ತು ಶುಕ್ರವಾರ ನಡೆಸಲಾಗಿದೆ.
"122 ಎಂಎಂ ಸಾಮರ್ಥ್ಯದ ರಾಕೆಟ್‌ಗಳ ಪ್ರಯೋಗವನ್ನು ಭಿನ್ನ ಶ್ರೇಣಿಗಳಿಗೆ ನಡೆಸಲಾಗಿದೆ. ಸಾಮರ್ಥ್ಯ ಪರಿಷ್ಕರಣೆಗೊಂಡಿರುವ ಈ ಪಿನಾಕಾ ರಾಕೆಟ್‌ಗಳು 45 ಕಿ.ಮೀ. ದೂರದವರೆಗೂ ತಲುಪಿ ನಿಗದಿತ ಗುರಿ ನಾಶಪಡಿಸಬಲ್ಲವು. ಎಲ್ಲಾ ರಾಕೆಟ್‌ಗಳ ಪ್ರಯೋಗವೂ ಯಶಸ್ವಿಯಾಗಿದೆ. ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೊ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಸೇರಿ ವಿವಿಧ ಪರೀಕ್ಷಾ ಪರಿಕರಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.
ಈ ರಾಕೆಟ್‌ಗಳನ್ನು ಪುಣೆ ಮೂಲದ ಆರ್ಮಾಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಂಸ್ಥೆ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ ಜೊತೆಗೂಡಿ ಅಭಿವೃದ್ಧಿಪಡಿಸಿವೆ. ದೀರ್ಘ ಶ್ರೇಣಿಯ ಕಾರ್ಯಕ್ಷಮತೆ ಸಾಧಿಸಲು ಪಿನಾಕಾ ರಾಕೆಟ್ ಸಾಮರ್ಥ್ಯ ಅಭಿವೃದ್ಧಿ ಮಾಡಲಾಗಿದೆ.