ತಿರುವನಂತಪುರ: ತೀವ್ರ ಕಂಗೆಟ್ಟಿರುವ ರಾಜ್ಯದ ಎಲ್ಲಾ ವಲಯಗಳ ಮಧ್ಯೆ ಇಂದು ನೂತನ ಸರ್ಕಾರವು ಮಂಡಿಸಿದ ಮುಂಗಡಪತ್ರದಲ್ಲಿ ರಾಜ್ಯದ ವ್ಯಾಪಾರಿ ವಲಯವನ್ನು ಪುಷ್ಠಿಗೊಳಿಸಲು ಯಾವುದೇ ಕ್ರಮಕ್ಕೆ ಸರ್ಕಾರ ಮುಂಗಾಗದಿರುವುದು ಖಂಡನಾರ್ಹ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಘಟಕ ತೀವ್ರ ಆರೋಪಮಾಡಿದೆ.
ಕಳೆದ ನಾಲ್ಕು ವರ್ಷಗಳಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ವ್ಯಾಪಾರ ವಲಯವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ ಎಂದು ಕೆ.ವ್ಯಾ.ವ್ಯ.ಏ.(kvves) ಸಮಿತಿಯ ನಾಯಕರು ಆರೋಪಿಸಿದ್ದಾರೆ. ರಾಜ್ಯ ಅಧ್ಯಕ್ಷ ಜಾಬಿ. ವಿ. ಸದಸ್ಯರಾದ ಟಿ. ಎಫ್. ಸೆಬಾಸ್ಟಿಯನ್, ಅಲಿಕುಟ್ಟಿ ಹಾಜಿ, ಕಮಲಾಲಯಂ ಸುಕು,. ಕೆ.ಡಿ.. ರಾಧಾಕೃಷ್ಣನ್, ಡಿ. ಮನೋಜ್ ಬಜೆಟ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ವಲಯ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಿಗೆ ಶೇ.4 ರ ಬಡ್ಡಿಗೆ ಸಾಲ ನೀಡಲಾಗುವುದಾಗಿ ಮುಂಗಡಪತ್ರ ತಿಳಿಸಿದೆ. ಈ ಬಗ್ಗೆ ಪದೇ ಪದೇ ಸಚಿವರು ಹೇಳುತ್ತಿರುವುದು ವ್ಯಾಪಾರಿಗಳ ಬಗ್ಗೆ ನಿರ್ಲಕ್ಷ್ಯದ ಆಳವನ್ನು ತೋರಿಸುತ್ತದೆ. 8300 ಕೋಟಿ ರೂ.ಗಳನ್ನು ಬಡ್ಡಿ ಸಬ್ಸಿಡಿಗಾಗಿ ಮೀಸಲಿಡಲಾಗುವುದು ಎಂದು ಬಜೆಟ್ ಆರಂಭದಲ್ಲಿ ಘೋಷಿಸಿದಾಗ, ವ್ಯಾಪಾರಿಗಳು ಭರವಸೆ ಹೊಂದಿದ್ದರು. ಆದರೆ ಫಲಾನುಭವಿಗಳ ಪಟ್ಟಿಯಲ್ಲಿ ವ್ಯಾಪಾರಿಗಳನ್ನು ಮಾತ್ರ ಸೇರಿಸದಿರುವುದರಿಂದ ತೀವ್ರ ಅನ್ಯಾಯವಾಗಿದೆ. ವ್ಯಾಪಾರಿಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಕೇರಳದ ವ್ಯಾಪಾರಿಗಳ ಕಣ್ಣೀರಿಗೆ ಕನಿಷ್ಠ ತಾತ್ಕಾಲಿಕ ಪರಿಹಾರವನ್ನು ಸರ್ಕಾರ ಒದಗಿಸಬೇಕು. ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾದ ಮಾರ್ಗವನ್ನು ಹುಡುಕುತ್ತಿರುವ ವ್ಯಾಪಾರಿಗಳಿಗೆ ಸರ್ಕಾರವೇ ದಾರಿ ತೋರಿಸಿದಂತಾಗುತ್ತದೆ ಎಂದು ನಾಯಕರು ಹೇಳಿರುವರು.