ಬದಿಯಡ್ಕ: ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಕೈಯಾರರ ಕುಟುಂಬದ ಸಂಯುಕ್ತಾಶ್ರಯದಲ್ಲಿ ಕೈಯಾರರ ಕವಿತಾ ಕುಟೀರದಲ್ಲಿ ದಿವಂಗತ ಡಾಕ್ಟರ್ ನಾಡೋಜ ಕೈಯಾರ ಕಿಞ್ಞಣ್ಣ ರೈರವರ 106ನೇ ಜನ್ಮದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡದ ಕಲಿ, ಮಹಾಕವಿ, ಕಾಸರಗೋಡಿನ ಗಟ್ಟಿಧ್ವನಿ, ಶತಾಯಿಷಿ ಕಯ್ಯಾರ ಕಿಂಞಣ್ಣ ರೈಯವರು ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಮಾತ್ರವಲ್ಲದೆ ಭೂಮಿಯ ಒಡಲಲ್ಲೂ ನಲ್ಮೆಯ ಬೀಜ ಬಿತ್ತಿ ಪರಿಶ್ರಮದಿಂದಲೇ ಪ್ರತಿಫಲದ ಬೆಳಕ ಕಂಡವರು. ರೈತನಾಗಿ, ಸಾಹಿತಿಯಾಗಿ, ಪಂಚಾಯತ್ ಅಧ್ಯಕ್ಷರಾಗಿ, ಭಾಷೆಯ ಮೇಲಿನ ಅತೀವ ಪ್ರೀತಿ ಹಾಗೂ ಭಕ್ತಿಯಿಂದ ಭಾಷೆಯ ಉಳಿವಿಗಾಗಿ ಹೋರಾಡಿದ ಧೀಮಂತ ಹೋರಾಟಗಾರ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಗೂಗಲ್ ಮೀಟ್ ಮೂಲಕ ಮಾತನಾಡಿ ಕಯ್ಯಾರರು ದೇಶ ಕಂಡ ಮಹಾನ್ ಚೇತನ ಅವರ ಹುಟ್ಟುಹಬ್ಬ ಆಚರಿಸುವುದು ಮತ್ತು ಅವರ ದಾಖಲಾತಿಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಪ್ರೊ.ಎ ಶ್ರೀನಾಥ್ ಕೈಯಾರರ ಜೀವನಗಾಥೆಯನ್ನು ನೆನಪಿಸಿದರು. ಕಾರ್ಯಕ್ರಮದಲ್ಲಿ ಮಾಹಿನ್ ಕೇಳೋಟ್ ( ಬದಿಯಡ್ಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು) ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಯಕ್ಷಗುರು ಜಯರಾಮ್ ಪಾಟಾಳಿ ಪಡುಮಲೆ, ಮಮ್ಮುಞ ಪಚ್ಚಂಬಳ ಮುಂತಾದವರು ಶುಭಾಶಂಸನೆಗೈದರು. ಕೋರೋನ ಈ ಕಾಲದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ವಸಂತ ಬಾರಡ್ಕ, ಜೋತ್ಸ್ನಾ ಕಡಂದೇಲು, ಚಿತ್ತರಂಜನ್, ಪ್ರದೀಪ್ ಕಡಂಬಾರ್ ಮುಂತಾದವರು ಕಯ್ಯಾರರ ಆಯ್ದ ಕವನಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕಯ್ಯಾರರ ಪುತ್ರ ಪ್ರಸನ್ನಕುಮಾರ ಸ್ವಾಗತಿಸಿ, ಕೃಷ್ಣ ಪ್ರದೀಪ ರೈ ವಂದಿಸಿದರು. ನಿರಂಜನ ರೈ ಪೆರಡಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಆರತಿ ರೈ, ರಂಗನಾಥ ರೈ, ಉಷಾಲತಾ, ಪ್ರಸನ್ನ ರೈ, ರವಿರಾಜ ರೈ, ಸುಷ್ಮಾ ರವಿರಾಜ್, ಪ್ರಜ್ವಲ್ ರೈ, ಋಷೀಕಾ ಪ್ರಜ್ವಲ್, ಉಮಾವತಿ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೈಯಾರರ ಕುಟುಂಬದವರಿಂದ ಕೋರೋನ ಕಿಟ್ ವಿತರಿಸಲಾಯಿತು.
ಕಾಸರಗೋಡಿನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಮಹಾನ್ ಕವಿ ಕಯ್ಯಾರ ಕಿಞ್ಞಣ್ಣ ರೈ : ಎಡನೀರು ಶ್ರೀಗಳು:
ಕಾಸರಗೋಡಿನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಮಹಾನ್ ಕವಿ ಕಯ್ಯಾರ ಕಿಞ್ಞಣ್ಣ ರೈ ಎಂದು ಎಡನೀರು ಮಠರ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನುಡಿದರು. ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಕಯ್ಯಾರರ ಕುಟುಂಬದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕಯ್ಯಾರರ 106ನೇ ಜನ್ಮದಿನಾಚರಣೆಯ ಸಲುವಾಗಿ ಶ್ರೀ ಮಠದಿಂದ ನೀಡಿದ ಸಂದೇಶದಲ್ಲಿ ಕಯ್ಯಾರರ ಹೆಸರಲ್ಲಿ ಆರಂಭಿಸಿದ ಲೈಬ್ರರಿಗೆ ಕಾಯಕಲ್ಪವಾಗಬೇಕಿದೆ. ಕಾಸರಗೋಡಲ್ಲಿ ಕಯ್ಯಾರರ ಹೆಸರಲ್ಲಿ ಹೆಚ್ಚು ಹೆಚ್ಚು ಕಾರ್ಯಗಳು ನಡೆಯಬೇಕಿದೆ. ಸಾಹುತ್ಯ, ರಾಜಕೀಯ, ಕೃಷಿ, ಅಧ್ಯಾಪನ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ಸಮರ್ಥ ನಾಯಕನಾಗಿ ಮುನ್ಮಡೆದವರು. ಅವರನ್ನು ಕನ್ನಡಿಗರು ಸದಾ ಸ್ಮರಿಸಬೇಕು ಎಂದು ನುಡಿದರು.