ನವದೆಹಲಿ: ಜಾಮೀನು ಪಡೆಯುವುದಕ್ಕೆ ಸಲ್ಲಿಸಿರುವವರ ಅರ್ಜಿಗಳನ್ನು ವಿಚಾರಣೆಯ ಪಟ್ಟಿಯಲ್ಲಿ ಸೇರಿಸದೇ ಇರುವುದು ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ನ್ಯಾಯಾಧೀಶರ ಒಟ್ಟಾರೆ ಸಂಖ್ಯಯ ಅರ್ಧದಷ್ಟು ನ್ಯಾಯಾಧೀಶರು ಪರ್ಯಾಯ ದಿನಗಳಲ್ಲಿ ವಿಚಾರಣೆ ನಡೆಸಬೇಕು ಈ ಮೂಲಕ ಯಾತನೆಯಲ್ಲಿರುವವರನ್ನು ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಂಜಾಬ್-ಹರ್ಯಾಣ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಒಂದು ವರ್ಷದಿಂದ ವಿಚಾರಣೆ ಪಟ್ಟಿಗೆ ಸೇರಿಸದೇ ಇರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಗೆ ನಿರಾಕರಿಸುವುದು ಆರೋಪಿಗೆ ನೀಡಲಾಗಿರುವ ಹಕ್ಕು ಮತ್ತು ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದೆ.
ಸಾಂಕ್ರಾಮಿಕದ ಅವಧಿಯಲ್ಲೂ ಎಲ್ಲಾ ಕೋರ್ಟ್ ಗಳೂ ವಿಚಾರಣೆ ನಡೆಸಿ ವಿವಾದಗಳನ್ನು ಇತ್ಯರ್ಥಗೊಳಿಸುವುದಕ್ಕೆ ಯತ್ನಿಸುತ್ತಿದ್ದರೆ, ಜಾಮೀನು ಅರ್ಜಿಯನ್ನು ಪಟ್ಟಿಗೆ ಸೇರಿಸದೇ ಇರುವುದು ನ್ಯಾಯಾಂಗ ಆಡಳಿತ ಸೋಲುವಂತೆ ಮಾಡುತ್ತಿದೆ ಎಂದು ನ್ಯಾ.ಹೇಮಂತ್ ಗುಪ್ತ ಹಾಗೂ ವಿ.ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ನ್ಯಾಯಾಧೀಶರ ಒಟ್ಟಾರೆ ಸಂಖ್ಯಯ ಅರ್ಧದಷ್ಟು ನ್ಯಾಯಾಧೀಶರು ಪರ್ಯಾಯ ದಿನಗಳಲ್ಲಿ ವಿಚಾರಣೆ ನಡೆಸಬೇಕು ಈ ಮೂಲಕ ಯಾತನೆಯಲ್ಲಿರುವವರನ್ನು ಆಲಿಸಬೇಕು ಎಂದು ಆದೇಶ ನೀಡಿದೆ.
2020 ರ ಫೆ.28 ರಿಂದಲೂ ಜಾಮೀನು ಅರ್ಜಿ ವಿಚಾರಣೆ ಬಾಕಿ ಇರುವುದನ್ನು ಹಾಗೂ ಹೈಕೋರ್ಟ್ ನಿರಾಕರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
ಹೈಕೋರ್ಟ್ ಗಳು ನೀಡುವ ಆದೇಶಗಳ ಬಗ್ಗೆ ನಾವು ಸಾಮಾನ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಒಂದು ವರ್ಷದಿಂದ ಜಾಮೀನು ಅರ್ಜಿ ವಿಚಾರಣೇ ಬಾಕಿ ಇರುವುದನ್ನು ಕಂಡು ಆಘಾತವಾಗಿ ಈ ಆದೇಶ ನೀಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.