ಕೊಚ್ಚಿ: ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ರಾಜೀನಾಮೆ ನೀಡಿದ್ದಾರೆ. ದೂರದರ್ಶನದ ಚರ್ಚೆಯ ಸಂದರ್ಭ ದೂರು ನೀಡಿದ ಮಹಿಳೆಯೋರ್ವರಲ್ಲಿ ಅಸಭ್ಯರಾಗಿ ಮಾತನಾಡಿದ ಘಟನೆಯ ಬಳಿಕ ರಾಜ್ಯವ್ಯಾಪಿಯಾಗಿ ರಾಜೀನಾಮೆಯ ಒತ್ತಾಯ ಕೇಳಿಬಂದಿತ್ತು. ಪಕ್ಷದ ಕೋರಿಕೆಯ ಮೇರೆಗೆ ಜೋಸೆಫೀನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವರು. ಜೋಸೆಫೀನ್ ಅವರಿಗೆ ಅಧಿಕಾರಾವಧಿ 11 ತಿಂಗಳು ಬಾಕಿ ಇರುವ ಹೊತ್ತಲ್ಲೇ ಇದೀಗ ವಿವಾದದ ಕಾರಣ ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಮೊನ್ನೆ ರಾತ್ರಿ ದೂರದರ್ಶನದ ಚರ್ಚೆಯೊಂದರಲ್ಲಿ, ಜೋಸೆಫೀನ್ ಯುವತಿಯನ್ನು ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಲು ಕರೆದ ಯುವತಿಯೊಂದಿಗೆ ಜೋಸೆಫೀನ್ ಕೋಪದಿಂದ ಮಾತನಾಡಿದರು ಮತ್ತು ಸಮಾಧಾನಕರ ಮಾತುಗಳನ್ನು ನೀಡುವ ಬದಲು ಕೆಟ್ಟದಾಗಿ ವರ್ತಿಸಿದರು. ಮಹಿಳಾ ಆಯೋಗದ ಅಧ್ಯಕ್ಷರು ಮಾಡಿದ ಹೇಳಿಕೆಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ಕೂಡಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಅವರು ವಿವಾದದ ಬಗ್ಗೆ ಬಳಿಕ ದುಃಖ ವ್ಯಕ್ತಪಡಿಸಿದರು. ಆದರೆ ಪಕ್ಷದ ಮುಖಂಡರು ಇದನ್ನು ತಿರಸ್ಕರಿಸಿದರು. ಈ ಹಿಂದೆ ಇಂತಹ ಘಟನೆಗಳಿಗೆ ನಾಯಕರು ಜೋಸೆಫೀನ್ ಅವರನ್ನು ಟೀಕಿಸಿದ್ದರು. ಇಂದು ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಯಿತು.