ನವದೆಹಲಿ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ಕೇರಳದ ಕೊಚ್ಚಿ ಬಳಿಯ ಅರಬಿ ಸಮುದ್ರದಲ್ಲಿ ಹುರುಳಿ ಆಕಾರದ 'ನೀರೊಳಗಿನ ದ್ವೀಪ' ಪತ್ತೆಯಾಗಿದ್ದು, ಇದು ತಜ್ಞರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಮೊದಲು ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ಗಮನಿಸಿದೆ. ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೊಸೈಟಿಯು ನಂತರ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯಕ್ಕೆ (ಕುಫೋಸ್) ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದೆ.
ಈ ನಡುವೆ ಅನೇಕ ಮಂದಿಯಲ್ಲಿ ಉಂಟಾಗಿರುವ ಗೊಂದಲವೆಂದರೆ, ಸ್ಥಳದಲ್ಲಿ ಯಾವುದೇ ಭೂಮಿ ಅಥವಾ ರಚನೆ ಇಲ್ಲ, ಆದರೆ ಗೂಗಲ್ ನಕ್ಷೆಗಳ ಪ್ರಕಾರ, 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿರುವ ಹುರುಳಿ ಆಕಾರದ ದ್ವೀಪವೊಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಕುಫೋಸ್‌ನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕುಫೋಸ್‌ನ ಉಪಕುಲಪತಿ ಕೆ ರಿಜಿ ಜಾನ್, ''ಗೂಗಲ್ ನಕ್ಷೆಗಳನ್ನು ನೋಡುವಾಗ, ಇದು ಜಗತ್ತಿನಾದ್ಯಂತ ನಾವು ನೋಡುವ ಸಾಮಾನ್ಯ ನೀರೊಳಗಿನ ದ್ವೀಪದಂತೆ ಕಾಣುತ್ತದೆ. ಈ ಬಗ್ಗೆ ಅವಲೋಕನಗಳು ನಡೆದಿವೆ. ಈ ದ್ವೀಪಕ್ಕೂ ಒಂದು ನಿರ್ದಿಷ್ಟ ಆಕಾರವಿದೆ. ಆದರೆ ಅದು ಮರಳು ಅಥವಾ ಜೇಡಿಮಣ್ಣಿನಿಂದ ಕೂಡಿದೆಯೇ ಮತ್ತು ಎರಡೂ ಕೂಡಾ ಇದೆಯೇ ಎಂಬುದು ನಮಗೆ ತಿಳಿದಿಲ್ಲ. ತನಿಖೆಯಯ ಮೂಲಕ ಮಾತ್ರ ನಾವು ಅದನ್ನು ಕಂಡುಹಿಡಿಯಬಹುದು. ಅದರ ನಂತರವೇ, ನಾವು ಈ ಬಗ್ಗೆ ಮಾಹಿತಿ ನೀಡಬಹುದು,'' ಎಂದು ತಿಳಿಸಿದ್ದಾರೆ.
"ನಾವು ಈ ಸಾಧ್ಯತೆಯನ್ನು ಸಹ ಪರಿಶೀಲಿಸಬೇಕು. ನೀರೊಳಗಿನ ಪ್ರವಾಹ ಅಥವಾ ತೀರ ಸವೆತದಂತಹ ಕಾರಣದಿಂದಾಗಿ ಈ ರೀತಿ ಆಗುತ್ತದೆ. ಕೇರಳದಲ್ಲಿಯೇ, ದಕ್ಷಿಣ ಪ್ರದೇಶದ ಕಡೆಗೆ ಸವೆತದ ಸಮಸ್ಯೆ ಇದೆ. ಆದರೆ ವೈಪೀನ್ (ಎರ್ನಾಕುಲಂ ಜಿಲ್ಲೆಯಲ್ಲಿ) ನಂತಹ ಪ್ರದೇಶಗಳಲ್ಲಿ, ಕಿಲೋಮೀಟರ್ ಉದ್ದದಲ್ಲಿ ಕೆಸರಿನ ಸಂಗ್ರಹ ಗಮನಿಸಲಾಗಿದೆ. ಈ ವಿದ್ಯಮಾನವು ಅದೇ ಕಾರಣದಿಂದ ಉಂಟಾಗಿದೆಯೆ ಎಂದು ನಾವು ನಿಖರವಾಗಿ ಹೇಳಲು ಸಾಧ್ಯವಿಲ್ಲ,'' ಎಂದು ಹೇಳಿದ್ದಾರೆ.