ಅಮೃತ ಬಳ್ಳಿ ಹೆಸರೇ ಸೂಚಿಸುವಂತೆ ಆರೋಗ್ಯದ ನೀಡುವ ಅಮೃತವೇ ಸರಿ. ಮನೆಯಲ್ಲಿ ಈ ಒಂದು ಗಡಿವಿದ್ದರೆ ಸಾಕು ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಸಬಹುದು. ಮಧುಮೇಹಿಗಳಿಗೆ ಇದು ತುಂಬಾನೇ ಒಳ್ಳೆಯದು. ಜ್ವರ, ಶೀತ ಮುಂತಾದ ಸಮಸ್ಯೆ ಕಾಣಿಸಿದರೆ ಇದರ ಕಷಾಯ ಮಾಡಿದರೆ ಸಾಕು ಜ್ವರ ಕಡಿಮೆಯಾಗುವುದು. ಆಯುರ್ವೇದದಲ್ಲಿ ಇದನ್ನು ಅನೇಕ ಕಾಯಿಲೆಗಳಿಗೆ ಬಳಸಲಾಗುತ್ತದೆ. ಇದನ್ನು ಬೆಳಸುವುದು ಸುಲಭವೇ ಎಂದು ನೋಡುವುದಾದರೆ ತುಂಬಾ ಸುಲಭ, ಇದರ ಬಳ್ಳಿ ಹಬ್ಬಿ ಹೋಗಲು ಮಾವಿನ ಮರ, ಸೀಬೆಕಾಯಿ ಮರ ಹೀಗೆ ಯಾವುದಾದರೂ ಮರವಿದ್ದರೆ ಸಾಕು, ಇನ್ನು ಮನೆ ಟೆರೇಸ್‌ನಲ್ಲಿ ಬೆಳೆಯುವುದಾದರೆ ಬಳ್ಳಿ ಹಬ್ಬಲು ವ್ಯವಸ್ಥೆ ಮಾಡಿದರೆ ಆಯ್ತು.
ಅಮೃತಬಳ್ಳಿ ನೆಡಲು ಮಳೆಗಾಲ ಅಥವಾ ಚಳಿಗಾಲ ಅತ್ಯುತ್ತಮವಾದ ಸಮಯವಾಗಿದೆ. ನೀವು ಅಮೃತ ಬಳ್ಳಿ ನೆಡುವುದಾದರೆ ಅನುಕೂಲಕರವಾಗುವ ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:
ಬಳ್ಳಿ ನೆಡುವುದಾದರೆ ನಿಮ್ಮ ಮಣ್ಣು ಫಲವತ್ತಾದ ಮಣ್ಣಾದರೆ ಬಳ್ಳಿ ತಂದು ನೆಟ್ಟರೆ ಸಾಕು, ಇಲ್ಲಾಂದರೆ ಆ ಮಣ್ಣಿಗೆ ಸಾವಯವ ಗೊಬ್ಬರ, ಸ್ವಲ್ಪ ಮರಳು ಹಾಕಿ ಹದ ಮಾಡಿ ನಂತರ ನೆಡಬೇಕು. ಹೂ ಕುಂಡದಲ್ಲಿ ನೆಡುವುದಾದರೆ ನೀವು ಪಾಟ್ ಅಥವಾ ಹೂ ಕುಂಡದಲ್ಲಿ ನೆಡುವುದಾದರೆ ಶೇ. 50ರಷ್ಟು ಮಣ್ಣು ಅದಕ್ಕೆ ಶೇ. 30ರಷ್ಟು ಸಾವಯವ ಗೊಬ್ಬರ, ಶೇ. 10ರಷ್ಟು ಮರಳು ಹಾಕಿ ಮಿಶ್ರ ಮಾಡಿ ಮಣ್ಣು ರೆಡಿ ಮಾಡಿ. ಹೂ ಕುಂಡದಲ್ಲಿ ನೀರು ಹೋಗಲು 3-4 ತೂತ ಇರಬೇಕು, ಹಳೆಯ ಬಕೆಟ್‌ನಲ್ಲಿ ಅಥವಾ ಒಡೆದ ಬಿಂದಿಗೆಯಲ್ಲಿ ನೆಡುವುದಾದರೆ ತೂತ ಮಾಡಿ ಅದಕ್ಕೆ ಮಣ್ಣು ತುಂಬಿ.
ನೆಡುವ ಬಳ್ಳಿಯ ಆಯ್ಕೆ ಹೇಗೆ? 30 ಸೆ. ಮೀ ಉದ್ದದಲ್ಲಿ ಬಳ್ಳಿಯನ್ನು ಕತ್ತರಿಸಿ, ನೆಡುವ ಭಾಗವನ್ನು45 ಡಿಗ್ರಿ ಆ್ಯಂಗಲ್‌ನಲ್ಲಿ ಕತ್ತರಿಸಿ. ನಂತರ ಬಳ್ಳಿಯ ತುಂಡನ್ನು ಮಣ್ಣಿನಲ್ಲಿ ನೆಟ್ಟು ಸ್ವಲ್ಪ ನೀರು ಹಾಕಿ. ನೆನಪಿರಲಿ ನೀರು ತುಂಬಾ ಹಾಕಬಾರದು. ನಂತರ ಅದನ್ನು ದೊಡ್ಡ ಪ್ಲಾಸ್ಟಿಕ್ ಬಾಟಲ್ ಅಥವಾ ಪಾಲಿಥೀನ್ ಕವರ್‌ನಿಂದ ಮುಚ್ಚಬೇಕು. ಮಳೆಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ಗಿಡ ನೆಟ್ಟಾಗ ಮಾತ್ರ ಈ ರೀತಿ ಮಾಡಬೇಕು, ಚಳಿಗಾಲದಲ್ಲಿ ಬೇಕಾಗಿಲ್ಲ. ಹೊರಗಡೆ ಉಷ್ಣಾಂಶ ಅಧಿಕವಿದ್ದರೆ ಮಣ್ಣು ಬೇಗನೆ ಒಣಗುವುದು, ಆದ್ದರಿಂದ ನೀರು ಹಾಕಿ ತೇವಾಂಶ ಕಾಪಾಡಬೇಕು, ಆದರೆ ನೆನಪಿರಲಿ ಅತಿಯಾಗಿ ನೀರು ಹಾಕಿದರೆ ಗಿಡ ಹಾಳಾಗುವುದು.
ಗಿಡ ಚಿಗುರು ಬಂದ ಮೇಲೆ ಗಿಡ ಚಿಗುರು ಬಂದ ಮೇಲೆ ಆ ಚಿಕ್ಕ ಪಾಟ್‌ನಿಂದ ದೊಡ್ಡ ಪಾಟ್‌ಗೆ ಅಥವಾ ನೆಲಕ್ಕೆ ಬದಲಾಯಿಸಬೇಕು. ಮೆಲ್ಲನೆ ಆ ಚಿಕ್ಕ ಪಾಟ್‌ನಿಂದ ನಿಧಾನಕ್ಕೆ ಗಿಡವನ್ನು ತೆಗೆಯಬೇಕು. ಬೇರುಗಳು ಅಲ್ಲಾಡಬಾರದು. ಆದ್ದರಿಂದ ಮೊದಲಿಗೆ ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ತುಂಬಿ ನೆಟ್ಟರೆ ಅದನ್ನು ಹರಿದರೆ ಸಾಕಾಗುತ್ತೆ, ನಂತರ ಹದ ಮಾಡಿದ ನೆಲದಲ್ಲಿ ಅಥವಾ ಮಣ್ಣು ತುಂಬಿದ ದೊಡ್ಡ ಹೂವಿನ ಕುಂಡದಲ್ಲಿ ನೆಡಬೇಕು. 2 ದಿನಕ್ಕೊಮ್ಮೆ ನೀರು ಹಾಕಿ, ಅಲ್ಲದೆ ಬಳ್ಳಿ ಸ್ವಲ್ಪ ದೊಡ್ಡದಾಗುವವರೆಗೆ ಸ್ವಲ್ಪ ನೆರಳಿನ ವ್ಯವಸ್ಥೆ ಮಾಡಿ.
ಸೂಚನೆಗಳು: ಅಮೃತ ಬಳ್ಳಿಗೆ ತುಂಬಾ ನೀರು ಬೇಕಾಗಿಲ್ಲ. * ಬಳ್ಳಿಯನ್ನು ಸ್ವಲ್ಪ ನೆರಳು ಇರುವ ಕಡೆ ನೆಡಿ. * ಹವಾಮಾನ: ಸಾಮಾನ್ಯವಾಗಿ ಎಲ್ಲಾ ರೀತಿಯ ವಾತಾವರಣದಲ್ಲಿ ಬೆಳೆಯುತ್ತದೆ. 320 ಮೀಟರ್ ಎತ್ತರದ ವಾತಾವರಣದಲ್ಲಿಯೂ ಬೆಳೆಯುವುದು. * ಮಣ್ಣು: ಎಲ್ಲಾ ರೀತಿಯ ಮಣ್ಣಿನಲ್ಲಿಯೂ ಇದು ಬೆಳೆಯುತ್ತದೆ.