ನವದೆಹಲಿ: 'ಬಾಲ ಕಾರ್ಮಿಕ ಪದ್ಧತಿಯ ನಿದರ್ಶನಗಳು ಕಂಡುಬಂದಲ್ಲಿ ಪೆನ್ಸಿಲ್ ಪೋರ್ಟಲ್ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ತಿಳಿಸಬೇಕು' ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ನಾಗರಿಕರಲ್ಲಿ ಶನಿವಾರ ಮನವಿ ಮಾಡಿದ್ದಾರೆ.
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ' ಪ್ರತಿ ಮಗುವಿಗೆ ಸಂತೋಷಕರ ಬಾಲ್ಯ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಈ ದಿನದಂದು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ನಾವೆಲ್ಲರೂ ಜತೆಯಾಗಿ ಮಕ್ಕಳಿಗೆ ಉತ್ತಮ ಬಾಲ್ಯವನ್ನು ಕೊಡಬಹುದು. ಉತ್ತಮ ಬಾಲ್ಯವನ್ನು ಹೊಂದುವ ಅರ್ಹತೆ ಎಲ್ಲಾ ಮಕ್ಕಳಿಗೂ ಇದೆ' ಎಂದು ಟ್ವೀಟ್ ಮಾಡಿದ್ದಾರೆ.
'ಎಲ್ಲಾದರೂ ಬಾಲ ಕಾರ್ಮಿಕ ಪದ್ಧತಿ ಕಂಡು ಬಂದರೆ, ಈ ಬಗ್ಗೆ ಪೆನ್ಸಿಲ್ ಪೋರ್ಟಲ್ https://pencil.gov.in ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ದೂರ ಸಲ್ಲಿಸಬೇಕು. ನಮ್ಮ ಮಕ್ಕಳು ಮತ್ತು ದೇಶದ ಭವಿಷ್ಯಕ್ಕಾಗಿ ನಾವು ಈ ಕೆಲಸವನ್ನು ಮಾಡಬೇಕಿದೆ' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.