ತಿರುವನಂತಪುರ: ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಹೇರಲಾಗಿದ್ದ ಸಂಪೂರ್ಣ ಲಾಕ್ ಡೌನ್ ನ್ನು ವಿಸ್ತರಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ 16 (ಇಂದು ರಾತ್ರಿಯಿಂದ) ಲಾಕ್ ಡೌನ್ ನಿಯಂತ್ರಣಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಹೇಳಿರುವರು.
ಕಳೆದ ಮೇ 8 ರಂದು ಪ್ರಾರಂಭವಾದ ಲಾಕ್‍ಡೌನ್ ನಿಂದ ಕೋವಿಡ್ ಎರಡನೇ ಅಲೆಯನ್ನು ಬಹುತೇಕ ನಿಯಂತ್ರಣದಲ್ಲಿರಿಸಲು ಸಫಲವಾಗಿದೆ. ಬಳಿಕ ಇದೀಗ ಜೂನ್ 17(ನಾಳೆಯಿಂದ)ನಿಯಂತ್ರಣಗಳಲ್ಲಿ ಹಂತಾನುಹಂತದ ವಿನಾಯ್ತಿ ನೀಡಲಾಗುತ್ತಿದೆ. ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭವಾದ ಎರಡನೇ ಅಲೆಯು ಮೇ ತಿಂಗಳಲ್ಲಿ ರಾಜ್ಯದಲ್ಲಿ ತೀವ್ರಗೊಂಡಿತು. ಇದೀಗ ಜೂನ್ ಆರಂಭದಿಂದ ಸೋಂಕು ಹರಡುವಿಕೆಯಲ್ಲಿ ಕೊನೆಗೂ ಗಣನೀಯ ನಿಯಂತ್ರಣ ಸಾಧ್ಯವಾಗಿದೆ. ಆದರೆ ಲಾಕ್‍ಡೌನ್ ನ್ನು ಪೂರ್ಣ ಪ್ರಮಾಣದಲ್ಲಿ ಹಿಂತೆಗೆದುಕೊಳ್ಳುವ ಮಟ್ಟವನ್ನು ತಲುಪಿಲ್ಲ, ಮತ್ತು ಈಗ ಲಾಕ್‍ಡೌನ್ ಪೂರ್ಣಗೊಂಡಿಲ್ಲವಾದ್ದರಿಂದ ಹೆಚ್ಚಿನ ರಿಯಾಯಿತಿಗಳನ್ನು ಸರಳೀಕರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ವಿವರಗಳಿಗೆ ಮುಂದೆ ಓದಿ..........
ನಿಬಂಧನೆಗಳು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಾತ್ರ!:
ಪರೀಕ್ಷಾ ಸಕಾರಾತ್ಮಕ ದರ (ಟಿಪಿಆರ್) ಆಧಾರದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸರಾಸರಿ 7 ದಿನಗಳ ಟೆಸ್ಟ್ ಪಾಸಿಟಿವಿಟಿ ದರವು 8 ಶೇ ವರೆಗೆ ಇದ್ದರೆ, ಅದನ್ನು 'ಕಡಿಮೆ ಹರಡುವಿಕೆ' ಎಂದು ಪರಿಗಣಿಸಲಾಗುತ್ತದೆ. ಶೇಕಡಾ 8 ರಿಂದ 20 ರಷ್ಟು ಇದ್ದರೆ ಮಧ್ಯಮ ಹರಡುವ ಪ್ರದೇಶವೆಂದು ಪರಿಗಣಿಸಲಾಗಿದೆ. ಇದು ಶೇಕಡಾ 20 ಕ್ಕಿಂತ ಹೆಚ್ಚಿದ್ದರೆ, ಅದನ್ನು ವಿಸ್ತರಣಾ ಪ್ರದೇಶವೆಂದು ಪರಿಗಣಿಸಲಾಗುತ್ತದೆ ಮತ್ತು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಶೇಕಡಾ 30 ಕ್ಕಿಂತ ಹೆಚ್ಚು ಟೆಸ್ಟ್ ಪಾಸಿಟಿವಿಟಿ ಇರುವಲ್ಲಿ ಲಾಕ್ ಡೌನ್ ನಿಯಂತ್ರಣಗಳಿರುತ್ತವೆ.
ಮಧ್ಯಮ ಸಾರ್ವಜನಿಕ ಸಾರಿಗೆ:
ಜೂನ್ 17 ರಿಂದ(ನಾಳೆಯಿಂದ) ಸಾರ್ವಜನಿಕ ಸಾರಿಗೆಯನ್ನು ಮಿತ ಪ್ರಮಾಣದಲ್ಲಿ ಅನುಮತಿಸಲಾಗುವುದು. ಜೂನ್ 17 ರಿಂದ ಬ್ಯಾಂಕುಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮಾತ್ರ ಕಾರ್ಯನಿರ್ವಹಿಸುತ್ತವೆ(ಈ ಹಿಂದಿನಂತೆ). ವಿವಾಹ ಮತ್ತು ಮರಣೋತ್ತರ ಸಮಾರಂಭಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಇತರ ಜನಸಂದಣಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಮತಿಸಲಾಗುವುದಿಲ್ಲ.
ಎಲ್ಲಾ ಅಗತ್ಯ ಸೇವಾ ಕೇಂದ್ರಗಳನ್ನು ತೆರೆಯಬಹುದು:
ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಚಟುವಟಿಕೆಗಳ ವ್ಯಾಪಾರ ಕೇಂದ್ರ ಸಹಿತ ಇತರ ವ್ಯವಸ್ಥೆಗಳನ್ನು ಎಲ್ಲಾ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಅನುಮತಿಸಲಾಗುವುದು. ಈ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ತುರ್ತು ಅಗತ್ಯದ ಮಳಿಗೆಗಳು ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಅಕ್ಷಯ ಕೇಂದ್ರಗಳು ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತವೆ.
ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್!:
ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದಾದ್ಯಂತ ಮುಂದಿನ ಆದೇಶ ಬರುವವರೆಗೂ ಪೂರ್ಣ ಲಾಕ್‍ಡೌನ್ ಇರುತ್ತದೆ. ಜೂನ್ 17 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸರ್ಕಾರಿ ಕಂಪನಿಗಳು, ಆಯೋಗಗಳು, ನಿಗಮಗಳು ಮತ್ತು ಸ್ವಾಯತ್ತ ಸಂಸ್ಥೆಗಳು ದಿನನಿತ್ಯದ ಶೇಕಡಾ 25 ರಷ್ಟು ಸಿಬ್ಬಂದಿಗಳ ಹಾಜರಾತಿಯೊಂದಿಗೆ ಪಾಳಿ ವ್ಯವಸ್ಥೆ(ಶಿಪ್ಟ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಸರ್ಕಾರಿ ಸಚಿವಾಲಯಗಳಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗಳು ಶಿಪ್ಟ್ ವ್ಯವಸ್ಥೆಯ ಆಧಾರದಲ್ಲಿ ಕಾರ್ಯನಿರ್ವಹಿಸಲಿವೆ.