ನವದೆಹಲಿ: ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ನೂತನ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆಯಾಗಿದ್ದಾರೆ. ಪಾರಸ್ ಪ್ರಸ್ತುತ ಬಿಹಾರದಲ್ಲಿನ ಹಾಜಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಪಕ್ಷದ ಕುಡಿ ಚಿರಾಗ್ ಪಾಸ್ವನ್ ಅವರನ್ನು ಎಲ್ ಜೆಪಿಯಲ್ಲಿ ಅಸ್ಥಿರಗೊಳಿಸುವ ಭಿನ್ನಮತೀಯರ ಯೋಜನೆಯ ಭಾಗವಾಗಿದೆ.
ಲೋಕಸಭೆಯಲ್ಲಿ ಎಲ್ ಜೆಪಿ ನಾಯಕನ ಸ್ಥಾನದಿಂದ ತೆಗೆಯುವುದಕ್ಕೆ ಸಂಬಂಧಿಸಿದಂತೆ ಆ ಪಕ್ಷದ ಐವರು ಸಂಸದರು ಇಂದು ಮಧ್ಯಾಹ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಜೊತೆಗೆ ಸಭೆ ಸೇರಿದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.
ಬಿಹಾರದಲ್ಲಿ ಎಲ್ ಜೆಪಿ ಜೆಡಿಯು ಸೇರ್ಪಡೆಯಾಗಲಿದೆ ಎಂಬ ವದಂತಿ ಕುರಿತಂತೆ ಪ್ರತಿಕ್ರಿಯಿಸಿದ ಪಾರಸ್, ಎಲ್ ಜೆಪಿ ಆಸ್ತಿತ್ವ ಮುಂದುವರೆಯಲಿದೆ. ಜೆಡಿಯು ಜೊತೆಗೆ ನಾವು ಸೇರುವುದಿಲ್ಲ, ದಿವಂಗತ ರಾಮ್ ವಿಲಾಸ್ ಪಾಸ್ವನ್ ಅವರ ಮಹತ್ವಕಾಂಕ್ಷೆಯನ್ನು ಪೂರ್ಣಗೊಳಿಸುತ್ತೇವೆ. ಆದಾಗ್ಯೂ, ಎನ್ ಡಿಎ ಭಾಗವಾಗಿ ಮುಂದುವರೆಯುವುದಾಗಿ ಅವರು ತಿಳಿಸಿದರು.