ಕಾಸರಗೋಡು: ಪರಿಶಿಷ್ಟ ಪಂಗಡ ಜನಾಂಗದ ಮಕ್ಕಳು ಬಹುಪಾಲು ಕಲಿಕೆ ನಡೆಸುತ್ತಿರುವ ಚೆನ್ನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶೋತ್ಸವ ಮಂಗಳವಾರ ಆನ್ ಲೈನ್ ಮೂಲಕ ನಡೆದುದು ಮಕ್ಕಳಿಗೆ ಸಂಭ್ರಮ ತಂದಿದೆ. ಹಿರಿಯ ವಿದ್ಯಾರ್ಥಿಗಳೊಂದಿಗೆ ಆನ್ ಲೈನ್ ಕಾರ್ಯಕ್ರಮ ವೀಕ್ಷಿಸಿದ ಮಕ್ಕಳಲ್ಲಿ ಸಹಜ ಕುತೂಹಲಗಳು ಕಂಡುಬಂದುವು. ತಮ್ಮ ತರಗತಿಯ ಶಿಕ್ಷಕರು ಯಾರು, ತಮ್ಮ ಸಹಪಾಠಿಗಳು ಯಾರು ಇತ್ಯಾದಿ ಪ್ರಶ್ನೆಗಳು ಅವರ ಕಂಗಳಲ್ಲಿ ಮೂಡಿದ್ದುವು. ಪೋಷಕರು ಜತೆಗಿದ್ದರು.
ಮುಖ್ಯ ಶಿಕ್ಷಕಿ ಮಿನಿ ಜೋಸೆಫ್ ಮತ್ತು ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದ ಪ್ರವೇಶೋತ್ಸವಕ್ಕೆ ನೇತೃತ್ವ ನೀಡಿದ್ದರು. ಮಕ್ಕಳಿಂದ ಕಲಾಕಾರ್ಯಕ್ರಮಗಳೂ ಜರುಗಿದುವು.
ಮನೆಗಳಲ್ಲಿ ಸಿಹಿ ವಿತರಣೆ, ಪಾಯಸ ಸಹಿತ ಭೋಜನ ಇತ್ಯಾದಿಗಳು ಸಂಭ್ರಮ ಹೆಚ್ಚಿಸಿದುವು. ಹಿತ್ತಿಲಲ್ಲಿ ನೆನಪಿನ ಮರವಾಗುವ ಸಸಿ ನೆಡಲು ವಿದ್ಯಾರ್ಥಿಗಳು ಉತ್ಸಾಹ ತೋರಿಸಿದ್ದರು.