ನವದೆಹಲಿ: ವಿಶೇಷ ಚೇತನರಿಗೆ ಸರ್ಕಾರಿ ವೃತ್ತಿ ಬಡ್ತಿಯಲ್ಲಿ ಕೋಟಾ ನಿರಾಕರಣೆ ಮಾಡುವಂತಿಲ್ಲ ಎಂಬ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕಳೆದ ವರ್ಷ ಮಹಿಳೆಯೊಬ್ಬರಿಗೆ ಬಡ್ತಿ ನೀಡುವುದಕ್ಕೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು.
ಈ ಆದೇಶವನ್ನು ಎತ್ತಿ ಹಿಡಿದಿರುವ ಕೋರ್ಟ್, ಸಮಾನ ಅವಕಾಶಗಳು, ಹಕ್ಕುಗಳ ಸಂರಕ್ಷಣೆ ಅಡಿಯಲ್ಲಿ ಮೀಸಲಾತಿಯ ಉದ್ದೇಶದಿಂದ ಹುದ್ದೆಗಳನ್ನು ಗುರುತಿಸುವ ಕೆಲಸ ತಕ್ಷಣವೇ ಆಗಬೇಕೆಂದು ಹೇಳಿದೆ.
ಕಾನೂನುಗಳನ್ನು ಜಾರಿಗೊಳಿಸುವುದು ಸುಲಭ ಆದರೆ ಕಾನೂನಿನ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಸಾಮಾಜಿಕ ಮನಸ್ಥಿತಿಯನ್ನು ಬದಲಾವಣೆ ಮಾಡುವುದು ಕಷ್ಟ ಸಾಧ್ಯ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹಾಗೂ ಆರ್ ಸುಭಾಷ್ ರೆಡ್ಡಿ ಅವರಿದ್ದ ಪೀಠ ತಿಳಿಸಿದೆ. "ಕೇರಳ ಹೈಕೋರ್ಟ್ ನೀಡಿರುವ ತೀರ್ಪು ಉಪಯುಕ್ತವಾಗಿದ್ದು ಹಸ್ತಕ್ಷೇಪ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ರಾಜೀವ್ ಕುಮಾರ್ ಗುಪ್ತಾ ಹಾಗೂ ಇತರರು ವಿರುದ್ಧ ಕೇಂದ್ರ ಸರ್ಕಾರ (2016) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕೇರಳ ಜಾರಿಗೊಳಿಸಿಲ್ಲ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಹೇಳಿದ್ದು, ಈ ಹಿಂದಿನ ಆದೇಶವನ್ನು ಜಾರಿಗೊಳಿಸುವುದಕ್ಕೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವುದು ಸೂಕ್ತ ಎಂದು ಕೋರ್ಟ್ ಭಾವಿಸುವುದಾಗಿ ಹೇಳಿದೆ. ವಿಶೇಷ ಚೇತನರಿಗೆ ಎಲ್ಲಾ ಹುದ್ದೆಗಳಲ್ಲೂ ಬಡ್ತಿ ನೀಡುವುದಕ್ಕೆ ಹುದ್ದೆಗಳನ್ನು ಗುರುತಿಸಬೇಕು, ಈ ಪ್ರಕ್ರಿಯೆ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಬೇಕೆಂದು ಕೋರ್ಟ್ ಆದೇಶಿಸಿದೆ.