ಹರಿದ್ವಾರ : ಕುಂಭಮೇಳದಲ್ಲಿ ಭಾಗಿಯಾಗಿರುವ ಅಧಿಕ ಜನರ ಕೊರೊನಾ ಪರೀಕ್ಷೆ ನಡೆಸಿರುವ ಖಾಸಗಿ ಪ್ರಯೋಗಾಲಯವೊಂದು ನಕಲಿ ಕೋವಿಡ್ -19 ಪರೀಕ್ಷಾ ವರದಿಗಳನ್ನು ನೀಡಿದೆ ಎಂಬ ಆರೋಪದ ಬಗ್ಗೆ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶಿಸಿದೆ. ಇತರೆ ಪ್ರಯೋಗಾಲಯವೂ ಕೂಡಾ ಈ ನಕಲಿ ವರದಿ ನೀಡಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಕೊರೊನಾ ಸಾಂಕ್ರಾಮಿಕ ನಡುವೆಯೇ ಲಕ್ಷಾಂತರ ಭಕ್ತರು ಸೇರುವ ಭವ್ಯ ಧಾರ್ಮಿಕ ಉತ್ಸವವನ್ನು ಏಪ್ರಿಲ್ 1 ರಿಂದ 30 ರವರೆಗೆ ಹರಿದ್ವಾರ, ಡೆಹ್ರಾಡೂನ್, ಟೆಹ್ರಿ ಮತ್ತು ಪೌರಿ ಜಿಲ್ಲೆಗಳಲ್ಲಿ ನಡೆಸಲಾಗಿದೆ.
ಪಂಜಾಬ್ ನಿವಾಸಿಯ ಪ್ರಕರಣವನ್ನು ಐಸಿಎಂಆರ್ ಪತ್ತೆ ಹಚ್ಚಿದ ಸಂದರ್ಭ ನಕಲಿ ವರದಿಗಳ ವಿಷಯ ಹೊರಬಿದ್ದಿದೆ. ಕುಂಭಮೇಳದ ಅವಧಿಯಲ್ಲಿ ಪಂಜಾಬ್‌ನಲ್ಲಿದ್ದ ಈ ವ್ಯಕ್ತಿಗೆ ತನ್ನ ಕೊರೊನಾ ಪರೀಕ್ಷಾ ಮಾದರಿ ಸಂಗ್ರಹ ಮಾಡಿರುವ ಬಗ್ಗೆ ಎಸ್‌ಎಂಎಸ್ ಬಂದಿದೆ. ಈ ಬೆನ್ನಲ್ಲೇ ನಕಲಿ ಪರೀಕ್ಷೆಗಾಗಿ ತನ್ನ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇಮೇಲ್ ಮೂಲಕ ಐಸಿಎಂಆರ್‌ಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆ ಉತ್ತರಾಖಂಡದ ಅಧಿಕಾರಿಗಳು ಕುಂಭಮೇಳ ಸಂದರ್ಭ ಆ ನಿರ್ದಿಷ್ಟ ಲ್ಯಾಬ್ ನಡೆಸಿದ ಎಲ್ಲಾ ಪರೀಕ್ಷೆಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಜನರ ವಿವರಗಳನ್ನು ಬಳಸಿಕೊಂಡು ಇಂತಹ ಹಲವು ನಕಲಿ ವರದಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದ ಬಳಿಕ ಈ ಬಗ್ಗೆ ಹೆಚ್ಚಿನ ತನಿಖೆಗೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.
ವಿಚಾರಣೆಯನ್ನು ಎದುರಿಸುತ್ತಿರುವ ಲ್ಯಾಬ್‌ಗೆ ಕುಂಭಮೇಳದ ಸಂದರ್ಭ ಪ್ರದೇಶದಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಕುಂಭ ಪ್ರವಾಸಿಗರೆಲ್ಲರ ಪರೀಕ್ಷೆ ನಡೆಸಲು ಕನಿಷ್ಠ 24 ಖಾಸಗಿ ಪ್ರಯೋಗಾಲಯಗಳನ್ನು ಗೊತ್ತು ಮಾಡಲಾಗಿತ್ತು. ಈ ಪೈಕಿ ಜಿಲ್ಲಾಡಳಿತ 14 ಮತ್ತು ಕುಂಭ ಮೇಳ ಆಡಳಿತವು 10 ಪ್ರಯೋಗಾಲಯದ ಜಾವಾಬ್ದಾರಿ ಹೊತ್ತಿತ್ತು. ವಿಶೇಷವೆಂದರೆ, ಕುಂಭಮೇಳದಲ್ಲಿ ಉತ್ತರಾಖಂಡ ಹೈಕೋರ್ಟ್ ಪ್ರತಿದಿನ 50,000 ಪರೀಕ್ಷೆಗಳ ಪರೀಕ್ಷಾ ಕೋಟಾವನ್ನು ನಿಗದಿಪಡಿಸಿತ್ತು.
''ಈ ನಕಲಿ ವರದಿ ಬಗ್ಗೆ ಪರೀಕ್ಷೆ ನಡೆಸಲು ಮುಖ್ಯ ಅಭಿವೃದ್ಧಿ ಅಧಿಕಾರಿ ನೇತೃತ್ವದ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಇತರ ಖಾಸಗಿ ಲ್ಯಾಬ್‌ಗಳು ನಡೆಸಿದ ಪರೀಕ್ಷೆಗಳನ್ನು ಸಹ ಮೊದಲ ಲ್ಯಾಬ್‌ನ ತನಿಖೆಯ ಆಧಾರದಲ್ಲಿ ತನಿಖೆ ಮಾಡಲಾಗುವುದು'' ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ತಿಳಿಸಿದ್ದಾರೆ. ಇನ್ನು ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.
''ನಕಲಿ ಕೋವಿಡ್ ವರದಿಗಳ ಆರೋಪಗಳು ನಿಜವೆಂದು ಕಂಡುಬಂದಲ್ಲಿ, ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ಜಿಲ್ಲಾಧಿಕಾರಿ ಹೇಳಿದರು.
ಕುಂಭಮೇಳ ಆರೋಗ್ಯ ಅಧಿಕಾರಿ ಅರ್ಜುನ್ ಸಿಂಗ್ ಸೆಂಗಾರ್, ''ಕುಂಭ ಮೇಳ ಅವಧಿಯಲ್ಲಿ 10 ಐಸಿಎಂಆರ್ ಅನುಮೋದಿತ ಖಾಸಗಿ ಲ್ಯಾಬ್‌ಗಳಲ್ಲಿ ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ಸೇರಿದಂತೆ 2.52 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಲ್ಯಾಬ್‌ಗಳಿಗೆ 9.45 ಕೋಟಿ ರೂ. ಹಣ ನೀಡಬೇಕಾಗಿದೆ. ತನಿಖೆಯಲ್ಲಿರುವ ಲ್ಯಾಬ್‌ಗೆ ಇನ್ನೂ ಹಣ ಪಾವತಿ ಮಾಡಿಲ್ಲ'' ಎಂದರು.
ಇನ್ನು ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ''ಈ ರೀತಿಯ ವಿಷಯಗಳು ಈ ಹಿಂದೆ ಗಮನಕ್ಕೆ ಬಂದಿವೆ. ತಾಂತ್ರಿಕ ಸಮಸ್ಯೆಯಿಂದ, ಐಡಿಗಳು ಮತ್ತು ಸಂಪರ್ಕ ವಿವರಗಳನ್ನು ತಪ್ಪಾಗಿ ಸಲ್ಲಿಸಿದ ಕಾರಣ, ಫೋನ್ ಸಂದೇಶವು ಇನ್ನೊಬ್ಬ ವ್ಯಕ್ತಿಗೆ ಹೋಗುತ್ತದೆ ಎಂದು ಕಂಡುಬಂದಿದೆ. ಪಾಸಿಟಿವ್ ಆದರೆ ಅದರಿಂದ ತಪ್ಪಿಸಿಕೊಳ್ಳಲು ಅನೇಕ ಮಂದಿ ತಪ್ಪು ವಿಳಾಸ, ಮೊಬೈಲ್ ಸಂಖ್ಯೆ ನೀಡುತ್ತಾರೆ'' ಎಂದು ಅಭಿಪ್ರಾಯಿಸಿದ್ದಾರೆ.