ನವದೆಹಲಿ: ಭಾರತದಲ್ಲಿ ಕೊವಾಕ್ಸಿನ್ ಲಸಿಕೆ ಹಾಕಿಸಿಕೊಂಡು ಹೋದ ವಿದ್ಯಾರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತಿವೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದಿದೆ.
ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ 18 ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಡಿ ಬರುವುದಿಲ್ಲ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಕೊವಾಕ್ಸಿನ್ ಲಸಿಕೆ ಪಡೆದ ಭಾರತೀಯರನ್ನು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಎಬಿವಿಪಿ ವಿವರಿಸಿದೆ.
ವಿದೇಶಿ ವಿಶ್ವವಿದ್ಯಾಲಯಗಳ ಇಂತಹ ಮನೋಧರ್ಮ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಅನನುಕೂಲವಾಗಲಿದ್ದು ಅವರ ಶೈಕ್ಷಣಿಕ ವರ್ಷಕ್ಕೆ ನಷ್ಟವಾಗುತ್ತದೆ. ಅಮೆರಿಕ ಅಥವಾ ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಸ್ಯಾಟ್ ತೇರ್ಗಡೆ ಹೊಂದಿರುವ 18 ವರ್ಷಕ್ಕಿಂತ ಕೆಳಗಿನ ಹಲವು ವಿದ್ಯಾರ್ಥಿಗಳು ಲಸಿಕಾ ಯೋಜನೆಯಡಿ ಸೇರುವುದಿಲ್ಲ, ಇದರಿಂದ ಅವರ ಶೈಕ್ಷಣಿಕ ವರ್ಷ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಪರಿಸ್ಥಿತಿಯ ಅನಿಶ್ಚಿತತೆ ಮತ್ತು ಗಂಭೀರತೆಯನ್ನು ಗಮನಿಸಿದ ಎಬಿವಿಪಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಪರಿಹರಿಸಲು ವಿನಂತಿಸಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಸುಶ್ರಿ ನಿಧಿ ತ್ರಿಪಾಠಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಆತಂಕ ಪರಿಹರಿಸಲು ನಾವು ಶೀಘ್ರದಲ್ಲಿಯೇ ಹೇಳಿಕೆ ನೀಡುವಂತೆ ಸಚಿವರಿಗೆ ವಿನಂತಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸಲು ನಾವು ಸರ್ಕಾರವನ್ನು ಕೋರಿದ್ದೇವೆ ಎಂದು ಹೇಳಿದರು.