ನವದೆಹಲಿ: ಸಿಬಿಎಸ್‌ಇ 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದಾಗಿದ್ದು ಫಲಿತಾಂಶವನ್ನು ಸಾಧ್ಯವಾದಷ್ಟೂ ತ್ವರಿತವಾಗಿ ನೀಡುವುದಾಗಿ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಜೂ.೦3 ರಂದು ಎಎನ್‌ಐ ನೊಂದಿಗೆ ಮಾತನಾಡಿರುವ ಅನುರಾಗ್ ತ್ರಿಪಾಠಿ, ನಾವು ಫಲಿತಾಂಶ ದಿನಾಂಕ, ದಿನವನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ, ಆದರೆ ಈ ಪ್ರಕ್ರಿಯೆ ಶೀಘ್ರವೇ ಮುಕ್ತಾಯಗೊಳ್ಳಬೇಕೆಂಬುದು ನಮಗೆ ತಿಳಿದಿದೆ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಥವಾ ವಿದೇಶಿ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಸಲ್ಲಿಸುವ ಗಡುವಿಗೂ ಮುನ್ನ ಫಲಿತಾಂಶ ಪ್ರಕಟವಾಗಲಿದೆ ಎಂದು ಅನುರಾಗ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಕಾರ್ಯದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಇನ್ನು 15 ದಿನಗಳಲ್ಲಿ ಸಿಬಿಎಸ್‌ಇ 12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದೆ.
"14 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಬೇಕಿರುವುದರಿಂದ ಈ ಮೌಲ್ಯಮಾಪನ ಪ್ರಕ್ರಿಯೆ, ಫಲಿತಾಂಶಗಳ ಮಾನದಂಡಗಳನ್ನು ನಿರ್ಧರಿಸುವುದಕ್ಕೆ ಕಾಲಾವಕಾಶ ಬೇಕು, ಈ ಬಗ್ಗೆ ಚರ್ಚೆಯೂ ಆಗಬೇಕಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲದೇ ಇದ್ದಲ್ಲಿ ಸಿಬಿಎಸ್‌ಇ ಅದಕ್ಕೆ ಪರ್ಯಾಯವಾಗಿ ಏನು ಆಯ್ಕೆ ನೀಡಲಿದೆ ಎಂಬ ಪ್ರಶ್ನೆಗೂ ಉತ್ತರಿಸಿರುವ ಅನುರಾಗ್ ತ್ರಿಪಾಠಿ, ಯಾವುದೇ ವಿದ್ಯಾರ್ಥಿಗೆ ತನಗೆ ಅನ್ಯಾಯವಾಗಿದೆ, ಇನ್ನೂ ಉತ್ತಮವಾದ ಫಲಿತಾಂಶ ಬರಬೇಕಿತ್ತು ಎಂದೆನಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಬರೆಯಲು ಏರ್ಪಾಡು ಮಾಡಲಾಗುವುದು, ಪರಿಸ್ಥಿತಿ ಅನುಕೂಲಕರವಾದಾಗ ಪರೀಕ್ಷೆ ಏರ್ಪಡಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೂ.1 ರಂದು ಮಹತ್ವದ ಘೋಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಬಿಎಸ್‌ಇಯ 12 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಇದಕ್ಕೂ ಮುನ್ನ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ 10 ನೇ ತರಗತಿ ಪರೀಕ್ಷೆಗಳನ್ನು ಏ.14 ರಂದು ರದ್ದುಗೊಳಿಸಿದ್ದರು.