ತಿರುವನಂತಪುರ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದೆಡೆ ಆಡಳಿತ ವರ್ಗ ಜನಸಾಮಾನ್ಯರ ನೆರವಿಗೆ ಇನ್ನಿಲ್ಲದ ಹರಸಾಹಸ ಮಾಡುತ್ತಿರುವುದು ಸಮಾಧಾನಕರ. ಹಲವು ಸೇವಾ ಸಂಸ್ಥೆಗಳೂ ಕೋವಿಡ್ ಸಂಕಷ್ಟದಲ್ಲಿ ಜನರ ಸಂಕಷ್ಟಕ್ಕೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆ ತಿರುವನಂತಪುರ ಜಿಲ್ಲೆಯ ಕಲ್ಲಿಕಾಡ್ ಗ್ರಾಮ ಪಂಚಾಯತ್ ಜನರಿಗೆ ಹಾಲು ಮತ್ತು ಬ್ರೆಡ್ ನ್ನು ವಿತರಿಸಿದೆ. ಅಕ್ಷಯ ಪಾತ್ರಂ ಯೋಜನೆಯ ಅಂಗವಾಗಿ ಪಂಚಾಯತ್‍ನ ಎಲ್ಲಾ ಮನೆಗಳಿಗೆ ಹಾಲು ಮತ್ತು ಬ್ರೆಡ್ ಉಚಿತವಾಗಿ ವಿತರಿಸಲಾಗುತ್ತಿದೆ.
ಅಕ್ಷಯ ಪಾತ್ರಂ ಎಂಬುದು ಹಳ್ಳಿಗಳನ್ನು ಹಸಿವೆಯಿಂದ ಮುಕ್ತವಾಗಿಸಲು ಗ್ರಾಮ ಪಂಚಾಯತ್ ಜಾರಿಗೆ ತಂದ ಯೋಜನೆಯಾಗಿದೆ. ವಾಜಿಚಾಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ನಾಡ್ ಹಾಲು ರೈತ ಸಂಘದಿಂದ ಪಂಚಾಯತ್‍ಗೆ ಹಾಲು ಮತ್ತು ಬ್ರೆಡ್ ನೀಡಲಾಗುತ್ತದೆ. ಪಂಚಾಯತ್ ಆಡಳಿತ ಸಮಿತಿಯು ಪಂಚಾಯತ್‍ನೊಂದಿಗಿನ ಸಹಕಾರಕ್ಕೆ ಸೊಸೈಟಿಗೆ ಧನ್ಯವಾದಗಳನ್ನು ಅರ್ಪಿಸಿದೆ.
ಬಿಜೆಪಿ ಆಡಳಿತದ ಪಂಚಾಯಿತಿಯಲ್ಲಿ ಅಧ್ಯಕ್ಷ ಪಂತಾ ಶ್ರೀಕುಮಾರ್ ನೇತೃತ್ವದಲ್ಲಿ ನಿರ್ಬಂಧಗಳು ಜಾರಿಯಲ್ಲಿರುವ ಈ ಹೊತ್ತಲ್ಲಿ ಇಂತಹ ದೌತ್ಯಕ್ಕೆ ಮುಂದಾಗಿದೆ. ಜೂ.4 ರಿಂದ 6 ರವರೆಗೆ ಗ್ರಾಮದಲ್ಲಿ ಮಾನ್ಸೂನ್ ಪೂರ್ವ ಸ್ವಚ್ಚತಾ ಕಾರ್ಯವೂ ನಡೆದಿದೆ.
ಜನಪರವಾದ ಇಂತಹ ಮಾದರಿ ಪಂಚಾಯತಿ ನಮ್ಮಲ್ಲೂ ಕಾರ್ಯನಿರ್ವಹಿಸಬೇಕೆಂಬುದು ಸಮರಸದ ಕಳಕಳಿ.