ಈಶಾನ್ಯ ಲಡಾಖ್ ನಲ್ಲಿ ಕಳೆದ ವರ್ಷ ಜೂ.15 ರಂದು ನಡೆದಿದ್ದ ಘರ್ಷಣೆ, ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ಸೇನೆಗಳು ಮಾತುಕತೆಯಲ್ಲಿ ತೊಡಗಿವೆ. ಈ ಪೈಕಿ ಸೇನಾ ಹಿಂತೆಗೆತದಿಂದ ಎಲ್ಎಸಿಯಲ್ಲಿ ಪರಿಸ್ಥಿತಿ ಒಂದಷ್ಟು ತಿಳಿಗೊಂಡಿರುವಂತಿದ್ದು, ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಬದಲಾಗಿ ವಿಭಾಗೀಯ ಕಮಾಂಡರ್ ಗಳೇ ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಿದ್ದಾರೆ ಹಾಗೂ ನಿರ್ಣಯಗಳು ಈ ಮಟ್ಟದಲ್ಲಿ ಚರ್ಚಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗೋಗ್ರಾ, ಹಾಟ್ ಸ್ಪ್ರಿಂಗ್ ಗಳಲ್ಲಿನ ಬಿಕ್ಕಟುಗಳಿಗೆ ಸಂಬಂಧಿಸಿದ ನಿರ್ಣಯ, ಮಾತುಕತೆಗಳನ್ನು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಸಬಹುದೆಂದು ಚೀನಾ ಭಾವಿಸಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾತುಕತೆಗಳು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಯಲಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಮಾತುಕತೆಯ ಅಗತ್ಯ ಬಂದಲ್ಲಿ ಮಾತ್ರ ಆ ಮಟ್ಟದ ಮಾತುಕತೆಗಳು ನಡೆಯಲಿವೆ.
ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಸೇನಾಧಿಕಾರಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.
ಗಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ವರ್ಕಿಂಗ್ ಮೆಕಾನಿಸಮ್ ಫಾರ್ ಕನ್ಸಲ್ಟೇಷನ್- ಕೋ-ಆರ್ಡಿನೇಷನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೇರ್ಸ್ (ಡಬ್ಲ್ಯುಎಂಸಿಸಿ) ಅಡಿಯಲ್ಲಿ ಈ ವರೆಗೂ 21 ಸುತ್ತಿನ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆದಿದ್ದು, ಭಾರತೀಯ XIV ಕಾರ್ಪ್ಸ್ ಕಮಾಂಡರ್ ಗಳು ಹಾಗೂ ಪಿಎಲ್ಎ ಕಮಾಂಡರ್ ಆಫ್ ಸೌತ್ ಜಿಂಗ್ಜಿಯಾಂಗ್ ಸೇನಾ ಜಿಲ್ಲೆಯ ನಡುವೆ 11 ಸುತ್ತಿನ ಮಾತುಕತೆ ನಡೆದಿದೆ.