ನವದೆಹಲಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ 68ನೇ ಪುಣ್ಯಸ್ಮರಣೆ ಅಂಗವಾಗಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು, ಮುಖರ್ಜಿಯವರ ಆದರ್ಶ, ಆಲೋಚನೆ, ತ್ಯಾಗ ಮನೋಭಾವವನ್ನು ಸ್ಮರಿಸುತ್ತಾ, ನುಡಿ ನಮನ ಸಲ್ಲಿಸಿದ್ದಾರೆ.
ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಉದಾತ್ತ ಆದರ್ಶಗಳು, ಆಲೋಚನೆಗಳು ಮತ್ತು ಜನಸೇವೆಯ ಬದ್ಧತೆ ನಮಗೆ ಸದಾ ಸ್ಪೂರ್ತಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
'ಶ್ಯಾಮ್‌ಪ್ರಸಾದ್ ಅವರು ರಾಷ್ಟ್ರೀಯ ಏಕೀಕರಣಕ್ಕಾಗಿ ಮಾಡಿದ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಗೃಹಸಚಿವ ಅಮಿತ್ ಶಾ, ಭಾರತದ ಅಸ್ಮಿತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಮುಖರ್ಜಿ ಅವರು ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. ಮುಖರ್ಜಿಯವರ ತ್ಯಾಗ, ಸಮರ್ಪಣಾ ಭಾವ ಮತ್ತು ಆದರ್ಶಗಳು ಮುಂಬರುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
'ಮುಖರ್ಜಿಯವರು ಜನಸಂಘ ಸ್ಥಾಪಿಸಿದ್ದು ಅಧಿಕಾರಕ್ಕಾಗಿ ಅಲ್ಲ, ರಾಷ್ಟ್ರೀಯ ಪುನರ್‌ನಿರ್ಮಾಣಕ್ಕಾಗಿ' ಎಂದು ಹೇಳಿರುವ ಅಮಿತ್ ಶಾ, 'ಅವರು ಸಾಂಸ್ಕೃತಿಕ ರಾಷ್ಟ್ರೀಯತೆಯ ವಾಸ್ತುಶಿಲ್ಪಿ. ಮಾತೃಭಾಷೆಯನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡಲು ಒಲವು ತೋರಿದ್ದರು' ಎಂದು ಸ್ಮರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, 'ಮುಖರ್ಜಿಯವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು' ಎಂದು ಟ್ವೀಟ್ ಮಾಡಿದ್ದಾರೆ.
'ಅಂದಿನ ಕಾಂಗ್ರೆಸ್ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನ ನೀಡಿದ್ದನ್ನು ತೀವ್ರವಾಗಿ ಟೀಕಿಸಿದ್ದರು. ಅದನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿದ್ದರು. ಆ ಕಾರಣಕ್ಕಗಿ ಅವರನ್ನು ಬಂಧಿಸಲಾಗಿತ್ತು' ಎಂದು ಹೇಳಿದ್ದಾರೆ.
'ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದು ಬಿಜೆಪಿ ಗುರಿಯಾಗಿತ್ತು. 2019ರಲ್ಲಿ ಎರಡನೇ ಬಾರಿಗೆ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಂತರ, ಆ ಗುರಿ ಈಡೇರಿತು' ಎಂದು ಅವರು ತಿಳಿಸಿದ್ದಾರೆ.
ಎಂದು ಅವರು ತಿಳಿಸಿದ್ದಾರೆ.