ಹವಾಮಾನ ಬದಲಾದಂತೆ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ, ಈ ಸಮಸ್ಯೆ ವಿಶೇಷವಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಮಳೆಗಾಲದಲ್ಲಿ, ವ್ಯಕ್ತಿಯ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದರಿಂದ ಆತ ಶೀಘ್ರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಮಳೆಗಾಲದಲ್ಲಿ ಹೊಟ್ಟೆಯ ಸೋಂಕು ವ್ಯಕ್ತಿಗೆ ಹೆಚ್ಚು ತೊಂದರೆ ನೀಡುವುದು. ಹೊಟ್ಟೆಯ ಜ್ವರ ಅಥವಾ ಜಠರದ ಸೋಂಕು ನೀರಿನಿಂದ ಹರಡುವ ರೋಗಗಳಲ್ಲಿ ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ನೀವು ಸಹ ತೊಂದರೆಗೀಡಾಗಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ಮಳೆಗಾಲದಲ್ಲಿ ನೀವು ಹೊಟ್ಟೆಯ ಸೋಂಕಿನಿಂದ ದೂರವಿರಬಹುದು. ಪ್ರೊಬಿಯಾಟಿಕ್ ಸಮೃದ್ಧವಾಗಿರುವ ಆಹಾರ: ಪ್ರೊಬಿಯಾಟಿಕ್ ಸಮೃದ್ಧವಾಗಿರುವ ಆಹಾರವು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಆಹಾರದಲ್ಲಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಮೊಸರು, ಡೈರಿ ಆಹಾರಗಳು, ಮೇಕೆ ಹಾಲು ಮತ್ತು ಮಿಸ್ಸೋ ಸೂಪ್ ಅಥವಾ ಉಪ್ಪಿನಕಾಯಿ ಮುಂತಾದ ಆಹಾರಗಳಲ್ಲಿ ಪ್ರೋಬಯಾಟಿಕ್ ಹೆಚ್ಚಾಗಿವೆ.
ಹೊಟ್ಟೆಯ ಜ್ವರದಿಂದದ ದೂರವಿರಲು ಸಹಾಯ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ನೀಡಿದ್ದೇವೆ:
ಆಯುರ್ವೇದ ಹಾಲು: ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕನ್ನು ದೂರಮಾಡುವುದು. ಈ ಆಯುರ್ವೇದ ಹಾಲು ತಯಾರಿಸಲು, 10 ಬಾದಾಮಿ ಅಥವಾ 3 ಖರ್ಜೂರಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಖರ್ಜೂರವಾದರೆ ಅವುಗಳನ್ನು ನೆನೆಸುವುದು ಬೇಡ, ಅವುಗಳನ್ನು ನೇರವಾಗಿ ಬಳಸಬಹುದು. ಬೆಳಿಗ್ಗೆ ಬಾದಾಮಿಯನ್ನು ಸಿಪ್ಪೆ ತೆಗೆದು, ಅದರ ಜೊತೆ ಖರ್ಜೂರ ಸೇರಿಸಿ ಎರಡನ್ನೂ ಪುಡಿಮಾಡಿ. ನಂತರ ಈ ಪೇಸ್ಟ್ ಅನ್ನು ಹಾಲಿನಲ್ಲಿ ಬೆರೆಸಿ ಅದಕ್ಕೆ ಅರಿಶಿನ, ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಈಗ ಇದಕ್ಕೆ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೆನಪಿನಲ್ಲಿಡಿ, ಬೆಳಿಗ್ಗೆ ಹಾಲು ಕುಡಿದ ನಂತರ, 40 ನಿಮಿಷಗಳ ಕಾಲ ಏನನ್ನೂ ತಿನ್ನಬೇಡಿ.ಸೋಲ್ ಕಡಿ: ಗೋವಾ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಆಹಾರ ಸೋಲ್ ಕಡಿಯು ತೆಂಗಿನ ಹಾಲು, ಗಸಗಸೆ ಮತ್ತು ಕೊಕುಮ್ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಸೊಲ್ಕಡಿಯಲ್ಲಿ ಕೊಬ್ಬು, ಸೋಡಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್, ಸಕ್ಕರೆ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ನಿಯಾಸಿನ್, ಸತು, ಸೆಲೆನಿಯಮ್, ರಂಜಕ ಮತ್ತು ವಿಟಮಿನ್ ಎ ಮತ್ತು ಸಿ ಇರುತ್ತದೆ. ಇದು ಹೊಟ್ಟೆಯನ್ನು ತಂಪಾಗಿರಿಸುವುದರ ಮೂಲಕ, ದೇಹದ ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ನಿರ್ವಿಷಗೊಳಿಸುವ ಮೂಲಕ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಸೋಲ್ ಕಡಿ ಮಾಡಲು, ಕೋಕಂ ಎಸಳುಗಳನ್ನು ನೀರಿನಲ್ಲಿ ನೆನೆಸಿಡಿ. ನಂತರ ನೆಂದ ಕೋಕಂಗಳನ್ನು ನೀರು ಸಮೇತ ಮಿಕ್ಸಿ ಜಾರ್‌ಗೆ ಹಾಕಿ ಹಸಿ ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿ ಬೆರೆಸಿ ನುಣ್ಣಗೆ ರುಬ್ಬಿ ಬೇರೆ ಪಾತ್ರೆಗೆ ಶೋಧಿಸಿ. ಅದಕ್ಕೆ ಉಪ್ಪು, ಸಕ್ಕರೆ ಮತ್ತು ತೆಂಗಿನ ಕಾಯಿ ಹಾಲು ಬೆರೆಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಸೋಲ್ ಕಡಿ ರೆಡಿ.
ಒಣ ಶುಂಠಿ ಸಿರಪ್: ಇದೊಂದು ಸಾಂಪ್ರದಾಯಿಕ ಪಾನೀಯವಾಗಿದ್ದು, ಇದನ್ನು ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಹೊಟ್ಟೆ ಉಬ್ಬರ ತಡೆಗಟ್ಟಲು ಬಳಸಲಾಗುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಹೊಟ್ಟೆಯ ಜ್ವರಕ್ಕೆ ಸಂಬಂಧಿಸಿದ ಹೊಟ್ಟೆಯ ಸೆಳೆತ ಮತ್ತು ನೋವು, ಜ್ವರ, ವಾಕರಿಕೆ ಮತ್ತು ತಲೆನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಒಣ ಶುಂಠಿ ಸಿರಪ್ ತಯಾರಿಸಲು, ಮೊದಲು ಒಣ ಶುಂಠಿಯನ್ನು 1 ಗ್ಲಾಸ್ ನೀರಿನಲ್ಲಿ ಕುದಿಸಿ. ಈಗ ಅದಕ್ಕೆ ಬೆಲ್ಲ, ಉಪ್ಪು ಮತ್ತು ಹುರಿದ ಜೀರಿಗೆ ಸೇರಿಸಿ. ಅದು ಸ್ವಲ್ಪ ತಣ್ಣಗಾದ ನಂತರ ಅದನ್ನು ಸೇವಿಸಿ.
ಪ್ರೋಟೀನ್ ಭರಿತ ಆಹಾರ: ಹೊಟ್ಟೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಮ್ಮ ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಸೇರಿಸಿಕೊಳ್ಳಬೇಕು. ಚೀಸ್, ದ್ವಿದಳ ಧಾನ್ಯಗಳು, ಕಾಳುಗಳು ಮತ್ತು ಮೊಟ್ಟೆಗಳಂತಹ ಪ್ರೋಟೀನ್ ಭರಿತ ವಸ್ತುಗಳ ಜೊತೆಗೆ, ನಿಮ್ಮ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಹ ಸೇರಿಸಿಕೊಳ್ಳಬೇಕು. ಆಹಾರದಲ್ಲಿ ಒಳಗೊಂಡಿರುವ ಈ ಪ್ರೋಟೀನ್ಗಳು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.