ತಿರುವನಂತಪುರ: ಕೋವಿಡ್ ಸೋಂಕಿಗೊಳಗಾಗಿ ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಮತ್ತು ಕೋರಂ ವಿದ್ಯಾರ್ಥಿಗಳಿಗೆ ವಿಶೇಷ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‍ಎಚ್‍ಆರ್‍ಸಿ) ನಿರ್ದೇಶಿಸಿದೆ. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆಂಥೋನಿ ಡೊಮಿನಿಕ್ ಅವರು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ನೋಂದಣಿದಾರರಿಗೆ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಯಾವುದೇ ರೀತಿಯ ಮಾನಸಿಕ ಒತ್ತಡವನ್ನು ಎದುರಿಸದಂತೆ ವ್ಯವಸ್ಥೆಗಳನ್ನು ಮಾಡುವಂತೆಯೂ ಆಯೋಗವು ಸಂಬಂಧಪಟ್ಟ ಕಾಲೇಜುಗಳಿಗೆ ನಿರ್ದೇಶನ ನೀಡಿತು. ಕೋವಿಡ್ ಹರಡುವಿಕೆಯು ಮುಂದುವರಿದಂತೆ ವಿದ್ಯಾರ್ಥಿಗಲಲ್ಲಿ ತೀವ್ರ ಗೊಂದಲಗಳು ಕಂಡುಬರುತ್ತಿದ್ದು, ಅವರಿಗೆ ಧೈರ್ಯ ತುಂಬಬೇಕಾಗಿದೆ ಎಂದು ಆಯೋಗ ತಿಳಿಸಿದೆ.
ಕೋವಿಡ್ ಮಾನದಂಡಗಳನ್ನು ಪಾಲಿಸುವ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪರೀಕ್ಷೆಗಳನ್ನು ಏರ್ಪಡಿಸುವ ಜವಾಬ್ದಾರಿ ವಿಶ್ವವಿದ್ಯಾಲಯಗಳಿಗೆ ಇದೆ ಎಂದು ನ್ಯಾಯಮೂರ್ತಿ ಆಂಥೋನಿ ಡೊಮಿನಿಕ್ ಆದೇಶದಲ್ಲಿ ತಿಳಿಸಿದ್ದಾರೆ. ಕೋವಿಡ್ ನಿರ್ಬಂಧಗಳು ಇರುವ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯಲು ಸುಲಭವಾಗುವಂತೆ ಆಯೋಗವು ಕಾಲೇಜುಗಳಿಗೆ ಕರೆ ನೀಡಿದೆ.
ಜುಲೈ 12 ರೊಳಗೆ ಈ ಆದೇಶದ ಆಧಾರದ ಮೇಲೆ ಕೈಗೊಂಡ ಕ್ರಮವನ್ನು ವಿಶ್ವವಿದ್ಯಾಲಯಗಳು ಲಿಖಿತವಾಗಿ ಆಯೋಗಕ್ಕೆ ತಿಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಹಲವಾರು ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.