ನವದೆಹಲಿ: ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಅವರೆಲ್ಲರೂ ಇಂದು ತಿಹಾರ್ ಜೈಲಿನಿಂದ ಹೊರಗಡೆ ಬಂದಿದ್ದಾರೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಕಳೆದ ವರ್ಷ ಮೇ ತಿಂಗಳಲ್ಲಿ ಇವರನ್ನು ಬಂಧಿಸಲಾಗಿತ್ತು. ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಎರಡು ದಿನಗಳ ನಂತರ ನ್ಯಾಯಾಲಯ ಈ ಆದೇಶ ನೀಡಿದೆ. ಮೂವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಮಹಾ ನಿರ್ದೇಶಕ ( ದೆಹಲಿ ಕಾರಾಗೃಹಗಳ) ಸಂದೀಪ್ ಗೋಯೆಲ್ ಖಚಿತಪಡಿಸಿದ್ದಾರೆ.
ದೇವಾಂಗನಾ ಕಲಿತಾ ಮತ್ತು ನರ್ವಾಲ್ ಅವರನ್ನು ಸಂಜೆ 7 ಗಂಟೆ ಸುಮಾರಿನಲ್ಲಿ ಮತ್ತು ತನ್ಹಾ ಅವರನ್ನು 7-30ರ ಸುಮಾರಿನಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ವಿಳಾಸ ಹಾಗೂ ಶ್ಯೂರಿಟಿಗಳ ಪರಿಶೀಲನೆ ವಿಳಂಬವಾಗಿದ್ದು ನಿಗದಿತ ವೇಳೆಯಲ್ಲಿ ಮೂವರು ವಿದ್ಯಾರ್ಥಿ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿರಲಿಲ್ಲ.
ಹೈಕೋರ್ಟ್ ನಿಂದ ಜಾಮೀನು ದೊರೆತ ನಂತರ ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ಹೋರಾಟಗಾರರು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಗುರುವಾರ ಮುಂದೂಡಿತ್ತು. ನಂತರ ಅವರು ಹೈಕೋರ್ಟ್ ಗೆ ಹೋದಾಗ, ಕೆಳ ನ್ಯಾಯಾಲಯ ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತು.
ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ 53 ಜನರು ಸಾವನ್ನಪ್ಪಿ, ಸುಮಾರು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಮೇ 2020 ರಂದು ಈ ಮೂವರು ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿತ್ತು. ಆದಾಗ್ಯೂ, ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ತೆರಳಿದ್ದಾರೆ.