ನವದೆಹಲಿ: ಕೋವಿಡ್ ಹೋರಾಟದಲ್ಲಿನ ಮುಂಚೂಣಿ ಹೋರಾಟಗಾರರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಕ್ರ್ಯಾಶ್ ಕೋರ್ಸ್)ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಚಾಲನೆ ನೀಡಿದ್ದಾರೆ.
ವಿಡಿಯೊ ಸಂವಾದ ಮೂಲಕ ಕೊವಿಡ್ -19 ಮುಂಚೂಣಿ ಹೋರಾಟಗಾರರಿಗೆ ಕಸ್ಟಮೈಸ್ ಮಾಡಿದ ಕ್ರ್ಯಾಶ್ ಕೋರ್ಸ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊರೋನಾ ಮುಂಚೂಣಿ ಹೋರಾಟಗಾರರನ್ನು ಕೊಂಡಾಡಿರುವ ಪ್ರಧಾನಿ ಮೋದಿಯವರು, ದೇಶದಲ್ಲಿ 1 ಲಕ್ಷ ಮುಂಚೂಣಿ ಹೋರಾಟಗಾರರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
26 ರಾಜ್ಯಗಳಲ್ಲಿ ವ್ಯಾಪಿಸಿರುವ 111 ತರಬೇತಿ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಸುಮಾರು 1 ಲಕ್ಷ ಕೋವಿಡ್ ವಾರಿಯರ್ಸ್ ಗೆ ಕೌಶಲ್ಯ ನೀಡಿ, ಅವರ ಕೌಶಲ್ಯ ವೃದ್ಧಿಸುವ ಗುರಿ ಹೊಂದಲಾಗಿದೆ. ಗೃಹ ಆರೈಕೆ ಬೆಂಬಲ, ಮೂಲ ಆರೈಕೆ ನೆರವು, ಅತ್ಯಾಧುನಿಕ ಆರೈಕೆ ನೆರವು, ತುರ್ತು ರಕ್ಷಣೆ ನೆರವು, ಮಾದರಿ ಸಂಗ್ರಹ ನೆರವು ಮತ್ತು ವೈದ್ಯಕೀಯ ಸಾಧನ ನೆರವು ಸೇರಿ ಆರು ಬಗೆಯ ಉದ್ಯೋಗಗಳಲ್ಲಿ ಕೋವಿಡ್ ವಾರಿಯರ್ಸ್ ಗೆ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 3.0 ಅಡಿ ಸುಮಾರು 276 ಕೋಟಿ ವೆಚ್ಚದ ಕೇಂದ್ರದ ನೆರವಿನೊಂದಿಗೆ ವಿಶೇಷ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ.
ಈ ಕಾರ್ಯಕ್ರಮದ ಮೂಲಕ ಸದ್ಯದ ಮತ್ತು ಭವಿಷ್ಯದ ಆರೋಗ್ಯದ ಕ್ಷೇತ್ರದ ಮಾನವ ಸಂಪನ್ಮೂಲದ ಅಗತ್ಯತೆಗಳನ್ನು ನೀಗಿಸಲು ಕೌಶಲ್ಯ ಹೊಂದಿದ ವೈದ್ಯಕೀಯೇತರ ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.