HEALTH TIPS

ಕೋವಿಡ್ ಸವಾಲು: ಅನುದಾನರಹಿತ ಶಾಲೆಯಿಂದ ಮಹತ್ತರ ಹೆಜ್ಜೆ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

 

         ಕುಂಬಳೆ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಪೋಷಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮನಗಂಡು ಅನುದಾನ ರಹಿತ ಶಾಲೆಯೊಂದು ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕಗಳನ್ನು ವಸೂಲು ಮಾಡದೆ ಉಚಿತ ಶಿಕ್ಷಣವನ್ನು ನೀಡಲು ಮುಂದೆ ಬಮದಿದ್ದು, ಹೊಸ |ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಲಿದೆ.

        ಪುತ್ತಿಗೆಯ  ಮುಹಿಮ್ಮತ್ ವಿದ್ಯಾಸಂಸ್ಥೆ  ಕ್ರಾಂತಿಕಾರಿ ನಿರ್ಧಾರವನ್ನು ಪ್ರಕಟಿಸುವ ಮೂಲಕ ಅಚ್ಚರಿ ಹಾಗೂ ಮೇಲ್ಪಂಕ್ತಿ ಒದಗಿಸಿದೆ. ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಉಚಿತ ಶಿಕ್ಷಣ ವ್ಯವಸ್ಥೆ ನೀಡುವುದಾಗಿ ಸಂಸ್ಥೆಯ ಆಡಳಿತ ಸಮಿತಿ ಜಂಟಿ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಕುಂಞ ಫೈಜಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

           ಮಲಯಾಳ ಮತ್ತು ಕನ್ನಡ ಮಧ್ಯಮ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ತರಗತಿಗಳಿಗೆ ಮತ್ತು ಮುಂದಿನ ಎಲ್ಲಾ ವರ್ಷಗಳಲ್ಲೂ ಉಚಿತ ಶಿಕ್ಷಣ ಒದಗಿಸುವುದಾಗಿ ಸಂಸ್ಥೆ ಪ್ರಕಟಿಸಿದೆ.

ಈ ಮೊದಲು ಈ ಸಂಸ್ಥೆ ಅನಾಥರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಶಿಕ್ಷಣ ವ್ಯವಸ್ಥೆ ನೀಡುತ್ತಿತ್ತು. ಇನ್ನು ನೂರಾರು ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಚಾರಿಟಿ ಫಂಡಿಂಗ್ ಮೂಲಕ ಇದರ ದೊಡ್ಡ ವೆಚ್ಚವನ್ನು ಭರಿಸುವುದಾಗಿ ಅಧಿಕೃತರು ತಿಳಿಸಿರುವರು. ಕೋವಿಡ್ ಸಂಕಷ್ಟದ ಸಂಧಿಕಾಲದಲ್ಲಿ ಸರ್ಕಾರವನ್ನು ಬೆಂಬಲಿಸಲು ಈಗಾಗಲೇ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಮುಹಿಮ್ಮತ್‍ನಲ್ಲಿ ಕೋವಿಡ್ ರೋಗಿಗಳಿಗೆ ಆರೈಕೆ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ, ವಿವಿಧ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಪೀಠೋಪಕರಣಗಳು, ಆಂಬ್ಯುಲೆನ್ಸ್ ಸೇವೆಗಳು ಮತ್ತು ಅಂತ್ಯಕ್ರಿಯೆಯ ಆರೈಕೆ ಸೌಲಭ್ಯಗಳನ್ನು ಒದಗಿಸುತ್ತಿದೆ. 

            ಪ್ರತಿ ವರ್ಷ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕುಳಿತು ಅತ್ಯುತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ಈ ಹಿಂದೆ, ಶಾಲೆಯು ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಸರ್ಕಾರವೂ  ಶಾಲೆಯ ಸಾಧನೆಗಳನ್ನು ಗುರುತಿಸಿದೆ. ಪರಿಸರ ಅಧ್ಯಯನ ಸಾಕ್ಷ್ಯಚಿತ್ರಕ್ಕೆ ಜಿಲ್ಲಾ ಮಟ್ಟದ ಮಾನ್ಯತೆ, ಮನೋರಮಾ ಗುಡ್ ಲೆಸನ್ ಕ್ಲಬ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ಮನೋರಮಾ ಗುಡ್ ಲೆಸನ್ ಕ್ಲಬ್ ಅತ್ಯುತ್ತಮ ಎರಡು ಜಿಲ್ಲಾ ಸಂಯೋಜಕರಿಗಿರುವ ಪ್ರಶಸ್ತಿ ಮತ್ತು ಮಾತೃಭೂಮಿ ಸೀಡ್ ಕ್ಲಬ್ ಅತ್ಯುತ್ತಮ ಜಿಲ್ಲಾ ಸಂಯೋಜಕರಿಗಿರುವ ಪ್ರಶಸ್ತಿಯನ್ನು ಮುಹಿಮ್ಮತ್ ಬಾಚಿಕೊಂಡಿತ್ತು.  ಶಾಲೆಯು ಸುಸಜ್ಜಿತ ಜೂನಿಯರ್ ಉಪಶಾಮಕ ಆರೈಕೆ ತಂಡವನ್ನು ಸಹ ಹೊಂದಿದೆ.

             ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆ ಹಿಂದುಳಿದ ಪುತ್ತಿಗೆ ಗ್ರಾ.ಪಂ. ಮತ್ತು ಸುತ್ತುಮುತ್ತಲಿನ ಶೈಕ್ಷಣಿಕ ಪ್ರಗತಿಗೆ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷ, ಕೋವಿಡ್ ಅವಧಿಯ ಕಾರಣದಿಂದಾಗಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಬಡ ಪೋಷಕರಿಗೆ ಶಾಲೆಯಲ್ಲಿ ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಿತ್ತು. ಆದರೆ ಸಂದಿಗ್ದತೆಯನ್ನು ಅರ್ಥೈಸಿದ ಶಾಲಾ ಆಡಳಿತ ಮಂಡಳಿ ಈ ವರ್ಷದಿಂದ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದು, ಮುಂದಿನ ವರ್ಷದಿಂದ ಹಂತಾನುಹಂತವಾಗಿ ಹೈಸ್ಕೂಲಿಗೂ ವಿಸ್ತರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದ್ದು, ಪೋಷಕರು ನಿರಾಳರಾಗಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅನುದಾನರಹಿತ ಶಾಲೆಯೊಂದು ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವುದು ಪ್ರಶಂಸೆಗೆ ಕಾರಣವಾಗಿದೆ.

          ಸುದ್ದಿಗೋಷ್ಠಿಯಲ್ಲಿ ಆಡಳಿತ ಸಮಿತಿ ಜಂಟಿ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಕುಂಞ ಫೈಜಿ, ಉಪಾಧ್ಯಕ್ಷ ಸೈಯದ್ ಹಬೀಬುಲ್ ಅಹ್ದಾಲ್, ಶೈಕ್ಷಣಿಕ ಕಾರ್ಯದರ್ಶಿ ಸೈಯದ್ ಮುನೀರುಲ್ ಅಹ್ದಾಲ್, ಖಜಾಂಜಿ ಹಾಜಿ ಅಮೀರಾಲಿ ಚೂರಿ, ಶಾಲಾ ವ್ಯವಸ್ಥಾಪಕ ಸುಲೈಮಾನ್ ಕರಿವೆಳ್ಳೂರ್, ಸಿ.ಎಚ್. ಮುಹಮ್ಮದ್ ಪಟ್ಲ, ಮೂಸಾ ಸಕಾಫಿ ಕಳತ್ತೂರು, ಅಬ್ದುಲ್ ಖಾದಿರ್ ಸಕಾಫಿ ಮೊಗ್ರಾಲ್, ಪ್ರಾಂಶುಪಾಲ ಎಂ.ಟಿ. ರೂಪೇಶ್, ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್ ಮಾಸ್ತರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries