ಕೊಚ್ಚಿ: ಕೇರಳದ ಪೊಲೀಸ್ ಅಧಿಕಾರಿ ಹಾಗೂ ಭಾರತದ ಖ್ಯಾತ ಈಜುಪಟು ಸಾಜನ್ ಪ್ರಕಾಶ್ ಅವರು ಶನಿವಾರ ಇಟಲಿಯಲ್ಲಿ ನಡೆದ ಈಜು ಸ್ಪರ್ಧೆಯೊಂದರಲ್ಲಿ ಒಲಿಂಪಿಕ್ 'ಎ' ಅರ್ಹತಾ ಮಾನದಂಡದಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೋಮ್‌ನಲ್ಲಿಶನಿವಾರ ನಡೆದ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಪ್ರಕಾಶ್ ಅವರು 1: 56.38 ಸೆಕೆಂಡ್ ನಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು.
26ರ ಹರೆಯದ ಈಜುಗಾರನ ಸಾಧನೆಯ ಬಗ್ಗೆ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿರುವ ಕೇರಳ ಪೊಲೀಸ್ ಇಲಾಖೆ, ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಕಾಶ್ ಕುತ್ತಿಗೆಯಲ್ಲಿ ಜಾರಿಬಿದ್ದ ಡಿಸ್ಕ್ ಅನ್ನು ಸರಿಪಡಿಸಿಕೊಳ್ಳಲು ಹೋರಾಡಿದ್ದರು. ಹೀಗಾಗಿ ಅವರ ಈ ಸಾಧನೆ ಇನ್ನಷ್ಟು ವಿಶೇಷವಾಗಿದೆ ಎಂದು ಕೇರಳ ಪೊಲೀಸ್ ಟ್ವೀಟಿಸಿದೆ.
ಭಾರತದ ಈಜು ಒಕ್ಕೂಟವು ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಪ್ರಕಾಶ್ ಅವರ ಸಾಧನೆಯ ಬಗ್ಗೆ ಟ್ವೀಟ್ ಮಾಡಿದೆ. ಇದನ್ನು "ಭಾರತೀಯ ಈಜಿನಲ್ಲಿ ಒಂದು ಮಹತ್ವಪೂರ್ಣ ಕ್ಷಣ" ಎಂದು ಕರೆದಿದೆ, ಅರ್ಹತಾ ಸ್ಪರ್ಧೆಯ ವೀಡಿಯೊವನ್ನು ಸಹ ಹಂಚಿಕೊಂಡಿದೆ.
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಸಾಜನ್ ಪ್ರಕಾಶ್ ಅವರನ್ನು ಅಭಿನಂದಿಸಿದರು.
"ಕ್ರೀಡೆಯ ಉನ್ನತ ಸ್ಥಾನಗಳಲ್ಲಿ ಭಾರತೀಯರು ಭಾಗವಹಿಸುವ ಹೊಸ ಯುಗ" ವನ್ನು ಇದು ಸೂಚಿಸುತ್ತದೆ ಎಂದು ಮಹೀಂದ್ರಾ ಆಶಿಸಿದರು.