ತಿರುವನಂತಪುರ: ಕೊರೋನಾ ಅವಧಿಯಲ್ಲಿ ಕೇರಳದಲ್ಲಿ ನಿರುದ್ಯೋಗ ಹೆಚ್ಚಿದೆ ಎಂದು ವರದಿಯಾಗಿದೆ. ಕೊರೋನಾ ವಿಸ್ತರಣೆಯ ಮೊದಲು, ಕೇರಳದಲ್ಲಿ ನಿರುದ್ಯೋಗ ದರವು ಶೇಕಡಾ 16.3 ರಷ್ಟಿತ್ತು. ಆದರೆ ಜೂನ್ 2020 ರ ವೇಳೆಗೆ ಅದು 27.3 ಕ್ಕೆ ಏರಿಕೆಯಾಗಿದೆ. ಭಾರತ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಉದ್ಯೋಗ ಸಮೀಕ್ಷೆ ಈವರದಿ ನೀಡಿದೆ.
ಕೇರಳದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ವಿದೇಶದಲ್ಲಿದ್ದವರು ಮರಳಿ ತಾಯ್ನಾಡಿಗೆ ಹಿಂದಿರುಗಿರುವುದು ಕಾರಣ ಎಂದು ಕಂಡುಬಂದಿದೆ. ಕೊರೋನಾ ಬಿಕ್ಕಟ್ಟಿನಿಂದ ಹಿಂದಿರುಗಿದ ವಲಸಿಗ ಕೇರಳಿಗರ ಸಂಖ್ಯೆ 8.43 ಲಕ್ಷ. ಅವರಲ್ಲಿ 5.52 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಿಗೆ ಉದ್ಯೋಗ ಲಭಿಸಬೇಕಿದೆ. ರಾಷ್ಟ್ರೀಯ ಮಟ್ಟದಲ್ಲಿ, ನಿರುದ್ಯೋಗವು 9.1 ಪ್ರತಿಶತದಿಂದ 20.8 ಕ್ಕೆ ಏರಿದೆ.
ಸ್ವಯಂ ಆಗಿ ಉದ್ಯೋಗ ಬಿಟ್ಟವರು ಮತ್ತು ವಜಾಗೊಳಿಸುವಿಕೆಯಿಂದ ಉದ್ಯೋಗ ಕಳಕೊಂಡವರು ಬೃಹತ್ ಪ್ರಮಾಣದಲ್ಲಿ ಏರಿಕೆಯಾದ್ದರಿಂದ ರಾಜ್ಯಕ್ಕೂ ತೀವ್ರ ಹೊಡೆತ ಬಿದ್ದಿದೆ. ಕೇರಳದಲ್ಲಿ ಉದ್ಯೋಗದಲ್ಲಿರುವ 127 ಲಕ್ಷ ಕಾರ್ಮಿಕರಲ್ಲಿ 48.10 ಲಕ್ಷ ಮಂದಿ ಸ್ವ ಉದ್ಯೋಗಿಗಳಾಗಿದ್ದಾರೆ. 35.2 ಲಕ್ಷ ಮಂದಿ ತಾತ್ಕಾಲಿಕ ಕೆಲಸಗಾರರು. ಕೊರೋನಾದ ಕಾರಣದಿಂದಾಗಿ ಎರಡೂ ಗುಂಪುಗಳು ತಮ್ಮ ಉದ್ಯೋಗವನ್ನು ವ್ಯಾಪಕವಾಗಿ ಕಳೆದುಕೊಂಡಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಮಾರ್ಚ್ 2020 ರ ಹೊತ್ತಿಗೆ 34.24 ಲಕ್ಷ ಜನರು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಮೇ. 31, ರ ವರದಿಯನುಸಾರ, ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 37.21 ಲಕ್ಷಕ್ಕೆ ಏರಿದೆ. ಆರಂಭದ ಲಾಕ್ ಡೌನ್ ಸಂದರ್ಭದ ನಷ್ಟ 350 ಕೋಟಿ ರೂ.ಗಳಾಗಿವೆ. ಕೇರಳದಲ್ಲಿ ಶೇಕಡಾ 22.1 ರಷ್ಟು ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದವರಾಗಿದ್ದಾರೆ ಎಂದು ವರದಿಯಾಗಿದೆ.